ಕೂಲಿ ಕಾರ್ಮಿಕರಿಗೆ ಶ್ರಮಿಕ ನಿವಾಸ ನಿರ್ಮಿಸಲು ಮುಂದಾದ ರಾಜ್ಯ ಸರಕಾರ

ಬೆಂಗಳೂರು: ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಿ, ನೆರವಿಗೆ ಮುಂದಾಗಿದೆ.ಈ ವಸತಿ ಸಮುಚ್ಚಯವು ರಸ್ತೆ ಬದಿಗಳಲ್ಲಿ ಟೆಂಟ್ ಗಳನ್ನು ಹಾಕಿಕೊಂಡು ಜೀವನ ನಡೆಸುವ ಕೂಲಿ ಕಾರ್ಮಿಕರಿಗೆ ಗೌರವಯುತವಾಗಿ ಜೀವನ ನಡೆಸಲು ಸಹಾಯ ಮಾಡುತ್ತದೆ. ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಕಾರ್ಮಿಕರು ಅಲ್ಲಿ ಜೀವನ ನಡೆಸಬಹುದು ಎಂದು ಕಾರ್ಮಿಕ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಕಾರ್ಮಿಕ ಇಲಾಖೆಯು ಈಗಾಗಲೇ ದೊಡ್ಡಬಳ್ಳಾಪುರ ತಾಲೂಕಿನ ಬ್ಯಾಡನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ 19 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರಮಿಕ ನಿವಾಸ, ವಸತಿ ಸಂಕೀರ್ಣವನ್ನು ನಿರ್ಮಾಣ ಮಾಡಿದೆ ಎಂದು ತಿಳಿದುಬಂದಿದೆ. ಈ ವಸತಿ ವ್ಯವಸ್ಥೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಏಕ ವ್ಯಕ್ತಿ ಸಮುಚ್ಚಯದಲ್ಲಿ ಸಾಮೂಹಿಕ ವಸತಿಗೆ ಅವಕಾಶವಿದೆ. ಏಕ ಹಾಸಿಗೆ ವ್ಯವಸ್ಥೆಯಡಿ 96 ಕಾರ್ಮಿಕರು ಮತ್ತು ದ್ವಿ ಹಾಸಿಗೆ ವ್ಯವಸ್ಥೆಯಡಿ 196 ಕಾರ್ಮಿಕರಿಗೆ ವಸತಿ ಅನುಕೂಲ ಲಭಿಸಲಿದೆ.
ಕುಟುಂಬದೊಂದಿಗೆ ಉಳಿದುಕೊಳ್ಳಲು ಬಯಸುವ ಕಾರ್ಮಿಕರಿಗೆ ಪ್ರತ್ಯೇಕ ಮನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದ್ದು, ಒಂದು ಕುಟುಂಬದಲ್ಲಿ ನಾಲ್ಕು ಮಂದಿ ಎಂಬಂತೆ 48 ಕಾರ್ಮಿಕ ಕುಟುಂಬಗಳಿಗೆ ಮೊದಲ ಹಂತದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಾಗಿದೆ. ಇದರಲ್ಲಿ ಶಿಶುವಿಹಾರದ ಸೌಲಭ್ಯವೂ ಇರಲಿದೆ. ರಾಜ್ಯದ ಹಲವೆಡೆ ಇರುವ ಕೈಗಾರಿಕಾ ಪ್ರದೇಶಗಳಲ್ಲೂ ಈ ಯೋಜನೆ ವಿಸ್ತರಣೆಯಾಗಲಿದೆ ಎಂದು ಕಾರ್ಮಿಕ ಇಲಾಖೆ ಮಾಹಿತಿ ನೀಡಿದೆ.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ರಾಜ್ಯದ ವಿವಿಧೆಡೆಯಿಂದ ಹಾಗು ಹೊರ ರಾಜ್ಯಗಳಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಆಗಮಿಸಿ ರಸ್ತೆ ಬದಿಯ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದರಿಂದ ಅವರ ಆರೋಗ್ಯಕ್ಕೂ ಹಾನಿಯಾಗುತ್ತಿದೆ. ಇದಕ್ಕಾಗಿಯೇ ನಾವು ಅವರಿಗೆ ನೈರ್ಮಲ್ಯದ ವಸತಿ ನೀಡಲು ಶ್ರಮಿಕ ನಿವಾಸವನ್ನು ಹೊರತಂದಿದ್ದೇವೆಂದು ಹೇಳಿದರು.































 
 

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮನೆಗಳನ್ನು ನಿರ್ಮಿಸಲಾಗುವುದು ಮತ್ತು ಇಲಾಖೆಯು ವಿದ್ಯುತ್ ಸರಬರಾಜು ಮತ್ತು ಇತರ ಮೂಲ ಸೌಕರ್ಯಗಳನ್ನು ಒದಗಿಸುತ್ತದೆ. ಮಂಡಳಿಯ ಗುರುತಿನ ಚೀಟಿ ಹೊಂದಿರುವವರು ಈ ಸೇವೆಯನ್ನು ಪಡೆಯಬಹುದು. ಇದರಿಂದ ಕೂಲಿ ಕಾರ್ಮಿಕರಿಗೆ ತಂಗಲು ಸ್ಥಳಾವಕಾಶದ ಸಮಸ್ಯೆಗಳು ಕಡಿಮೆಯಾಗಲಿವೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top