9 ಭದ್ರತಾ ಅಧಿಕಾರಿಗಳ ದುರ್ಮರಣ
ಪಾಕಿಸ್ತಾನ : ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಎರಡನೇ ಮಾರಣಾಂತಿಕ ದಾಳಿ ನಡೆದಿದ್ದು, 9 ಮಂದಿ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. 13 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಿಂದ ಭದ್ರತಾ ಪಡೆ ಅಧಿಕಾರಿಗಳು ವಾಪಸ್ ತೆರಳುವ ವೇಳೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಈ ಕೃತ್ಯದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಈವರೆಗೂ ಹೊತ್ತುಕೊಂಡಿಲ್ಲ. ಈ ಭಾಗದಲ್ಲಿ ಬಲೂಚಿಸ್ತಾನ ವಿಮೋಚನಾ ಪಡೆ ಹಾಗೂ ತೆಹ್ರಿಕ್ – ಇ – ತಾಲಿಬಾನ್ – ಪಾಕಿಸ್ತಾನ್ ಉಗ್ರ ಸಂಘಟನೆಗಳು ಸಕ್ರಿಯವಾಗಿವೆ. ಆತ್ಮಾಹುತಿ ಬಾಂಬ್ ಸ್ಫೋಟಗೊಂಡ ತೀವ್ರತೆಗೆ ಪೊಲೀಸ್ ಅಧಿಕಾರಿಗಳು ತೆರಳುತ್ತಿದ್ದ ಟ್ರಕ್ ಉರುಳಿ ಬಿದ್ದಿದೆ. ಘಟನಾ ಸ್ಥಳದ ತುಂಬೆಲ್ಲಾ ರಕ್ತದ ಕಲೆಗಳು ಹರಡಿವೆ.
ಈ ಘಟನೆ ಕುರಿತಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಚ್ಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮಿ ಆಘಾ ಅವರು, ಇದೊಂದು ಆತ್ಮಾಹುತಿ ಭಯೋತ್ಪಾದಕ ದಾಳಿ ಎಂದು ಖಚಿತಪಡಿಸಿದ್ದಾರೆ. ಜೊತೆಗೆ ಕಳೆದ 24 ಗಂಟೆಗಳಲ್ಲಿ ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆಯುತ್ತಿರುವ 2ನೇ ಘಟನೆ ಇದಾಗಿದ್ದು, ಯಾವುದೇ ಉಗ್ರ ಸಂಘಟನೆಯೂ ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ಘಟನಾ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ತನಿಖೆ ನಡೆಸುತ್ತಿದ್ದು, ಅವಶೇಷಗಳ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿರುವ ಬಲೂಚಿಸ್ತಾನ ಪ್ರಾಂತ್ಯದ ಮುಖ್ಯಮಂತ್ರಿ ಅಬ್ದುಲ್ ಖುದ್ದೂರ್ ಅವರು, ಈ ರೀತಿಯ ಸಂಚುಗಳನ್ನು ತಡೆಯಬೇಕಿದೆ. ಬಲೂಚಿಸ್ತಾನದಲ್ಲಿ ಶಾಂತಿ ಕಾಪಾಡಬೇಕಿದೆ. ಹೀಗಾಗಿ, ಜನತೆ ಸಹಕಾರ ನೀಡಿದರೆ ಮಾತ್ರ ಉಗ್ರರ ಈ ರೀತಿಯ ಕೃತ್ಯಗಳನ್ನು ತಡೆಯಬಹುದು ಎಂದು ಮನವಿ ಮಾಡಿದ್ದಾರೆ.
ಪಾಕಿಸ್ತಾನ ಸರ್ಕಾರದ ಭದ್ರತಾ ಪಡೆಗಳನ್ನೇ ಗುರಿಯಾಗಿಸಿ ದಾಳಿಗಳು ನಡೆಯುತ್ತಿದ್ದು, ಭಾನುವಾರ ಕೂಡಾ ಬಲೂಚಿಸ್ತಾನದ ಬಂದರು ನಗರಿ ಗ್ವಾದರ್‌ನಲ್ಲಿ ಇದೇ ಮಾದರಿಯ ದಾಳಿ ನಡೆದಿತ್ತು. ಭದ್ರತಾ ಪಡೆಗಳ ವಾಹನಗಳ ಮೇಲೆ ನಡೆದ ಈ ದಾಳಿಯ ವೇಳೆ ಓರ್ವ ಭದ್ರತಾ ಅಧಿಕಾರಿ ಮೃತಪಟ್ಟು, 8 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಭಾನುವಾರ ನಡೆದ ದಾಳಿಯ ಹೊಣೆಯನ್ನು ಬಲೂಚಿಸ್ತಾನ ವಿಮೋಚನಾ ಸಂಘಟನೆಯು ಹೊತ್ತುಕೊಂಡಿತ್ತು. ಜನವರಿ 30 ರಂದು ಪಾಕಿಸ್ತಾನದ ಪೆಶಾವರ ನಗರದಲ್ಲಿ ಮಸೀದಿಯಲ್ಲಿ ಬಾಂಬ್ ಸ್ಫೋಟಿಸಿತ್ತು. ಈ ವೇಳೆ ಪ್ರಾರ್ಥನೆ ನಡೆಸುತ್ತಿದ್ದ 80 ಮಂದಿ ಸಾವಿಗೀಡಾಗಿದ್ದರು.