ಹಲವು ಮನೆಗಳಲ್ಲಿ ಶೋಧ ಕಾರ್ಯಾಚರಣೆ
ಮಂಗಳೂರು : ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕಾರ್ಯಾಚರಣೆ ನಡೆಸಿ ಕೆಲವರನ್ನು ವಿಚಾರಣೆಗೊಳಪಡಿಸಿದೆ ಎಂದು ತಿಳಿದು ಬಂದಿದೆ. ಬಿಹಾರದ ಪಟ್ನಾದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಮೋದಿಯವರ ಚುನಾವಣಾ ರ್ಯಾಲಿಯಲ್ಲಿ ಬಾಂಬ್ ಸ್ಫೋಟಿಸಿ ವಿಧ್ವಂಸಕ ಕೃತ್ಯ ಎಸಗಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಈ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಎನ್‌ಐಎ ತಂಡ ಭಾನುವಾರ ಸಂಜೆ ನಂದಾವರ ಮತ್ತು ಪುತ್ತೂರು ತಾಲೂಕಿನ ಕೆಲವೆಡೆ ದಾಳಿ ನಡೆಸಿದೆ.
ಬಂಟ್ವಾಳ ತಾಲೂಕಿನ ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಫಾಜ್ ನವಾಜ್ ಹಾಗೂ ನೌಫಲ್ ಎಂಬವರ ಮನೆಗಳಿಗೆ ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸಿ ಮನೆಯವರನ್ನು ವಿಚಾರಣೆಗೊಳಪಡಿಸಿದೆ. ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ಇರ್ದೆಯ ರಫೀಕ್ ಎಂಬಾತನನ್ನು ಎನ್‌ಐಐ ಅಧಿಅಕರಿಗಳು ಬಂಧಿಸಿದ್ದಾರೆ ಎನ್ನಲಾಗಿದೆ. ಪಟ್ನಾದಲ್ಲಿ ಬಾಂಬ್ ಇಡಲು ಯತ್ನಿಸಿ ಬಂಧಿತರಾಗಿರುವ ಉಗ್ರರನ್ನು ವಿಚಾರಣೆಗೊಳಪಡಿಸಿದಾಗ ಅವರಿಗೆ ದಕ್ಷಿಣ ಕನ್ನಡದಿಂದ ಹಣಕಾಸಿನ ನೆರವು ಸಿಕ್ಕಿರುವ ವಿಚಾರ ತಿಳಿದುಬಂದಿದೆ.
ಎನ್‌ಐಎ ಇದೇ ಪ್ರಕರಣಕ್ಕೆ ಸಂಬಂಧಿಸಿ ಕೆಲ ದಿನಗಳ ಹಿಂದೆ ಎಸ್‌ಡಿಪಿಐ ಮುಖಂಡ ರಿಯಾಜ್ ಪರಂಗಿಪೇಟೆಯ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ದಕ್ಷಿಣ ಕನ್ನಡದಿಂದ ಉಗ್ರರ ಖಾತೆಗಳಿಗೆ ಕೋಟಿಗಟ್ಟಲೆ ರೂ. ರವಾನಿಸಲಾಗಿದೆ ಎನ್ನಲಾಗಿದೆ. ಭಾನುವಾರ ಸಂಜೆ ಹತ್ತಾರು ವಾಹನಗಳಲ್ಲಿ ಬಂದ ಎನ್‌ಐಎ ಅಧಿಕಾರಿಗಳು ಕ್ಷಿಪ್ರವಾಗಿ ಶೋಧ ಕಾರ್ಯಾಚರಣೆ ನಡೆಸಿ ವಾಪಸಾಗಿದ್ದಾರೆ.