ಮುಕ್ಕೂರು ಅಂಚೆ ಕಚೇರಿ ಉಳಿಸಿಕೊಳ್ಳಲು ಪೂರ್ವಭಾವಿ ಸಭೆ

ಮುಕ್ಕೂರು: ಊರಿನ ಅಂಚೆ ಕಚೇರಿಯು ವ್ಯವಹಾರ ಕುಸಿತದಿಂದ ಬೇರೆಡೆಗೆ ಸ್ಥಳಾಂತರ ಅಥವಾ ಮುಚ್ಚುವುದನ್ನು ಯಾರಿಂದಲೂ ಒತ್ತಡ ಹೇರಿ ತಡೆಯುವುದು ಸಾಧನೆ ಅಲ್ಲ. ಅದರ ಬದಲಾಗಿ ಅಂಚೆ ಕಚೇರಿಯಲ್ಲಿ ಪ್ರತಿಯೊಬ್ಬರು ಖಾತೆ ತೆರೆದು ವ್ಯವಹಾರ ಹೆಚ್ಚಳಗೊಳಿಸಿ ಸ್ವಂತ ಶಕ್ತಿಯಿಂದ ಅಂಚೆ ಕಚೇರಿ ಶಾಶ್ವತವಾಗಿ ಉಳಿಯುವಂತೆ ಮಾಡುವುದೇ ಸಾಧನೆ ಎಂದು ಪೆರುವಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹೇಳಿದರು.

ಬೆಳ್ಳಾರೆ ವ್ಯಾಪ್ತಿಯ ಪೆರುವಾಜೆ ಗ್ರಾಮದ ಮುಕ್ಕೂರು ಶಾಖಾ ಅಂಚೆ ಕಚೇರಿ ವ್ಯವಹಾರ ಕುಸಿದಿದ್ದು ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾನುವಾರ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಅಂಚೆ ಕಚೇರಿ ಇಲ್ಲೇ ಉಳಿಯಬೇಕು ಅನ್ನುವುದು ಎಲ್ಲರ ಅಪೇಕ್ಷೆ. ಅದನ್ನು ಒತ್ತಡ ಹಾಕಿ ಉಳಿಸಿಕೊಳ್ಳುವ ಸ್ಥಿತಿ ಬರಬಾರದು. ಅಂಚೆ ಕಚೇರಿ ಉಳಿಸಲು ಬೇಕಾದ ಖಾತೆ ತೆರೆದು ವ್ಯವಹಾರ ಮಾಡೋಣ. ಆಗ ಅಂಚೆ ಕಚೇರಿ ನಾಮಕಾವಸ್ತೆಗೆ ಉಳಿದುಕೊಳ್ಳದೇ ಜನರಿಗೆ ಪ್ರಯೋಜನಕಾರಿ ಕೇಂದ್ರವಾಗಿ ಉಳಿದುಕೊಳ್ಳಲು ಸಾಧ್ಯವಿದೆ ಎಂದರು.































 
 

ಜೈನುದ್ದೀನ್ ತೋಟದಮೂಲೆ ಮಾತನಾಡಿ, ಅಂಚೆ ಕಚೇರಿಯಲ್ಲಿ ಪ್ರತಿಯೊಬ್ಬರು ಖಾತೆ ತೆರೆಯುವ ನಿಟ್ಟಿನಲ್ಲಿ ಪ್ರಥಮವಾಗಿ ಪ್ರಯತ್ನ ಮಾಡೋಣ. ಅನಂತರ ಅಂಚೆ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ಸೌಲಭ್ಯಗಳ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದು ಸಲಹೆ ನೀಡಿದರು.

ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಸುಧಾಕರ ರೈ ಕುಂಜಾಡಿ ಮಾತನಾಡಿ, ವ್ಯವಹಾರ ವೃದ್ಧಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿದರು.

ಪ್ರಗತಿಪರ ಕೃಷಿಕ ರಾಮಚಂದ್ರ ಕೋಡಿಬೈಲು ಮಾತನಾಡಿ, ಐಪಿಪಿಬಿ ಖಾತೆ ಸೇರಿದಂತೆ ಅಂಚೆ ಇಲಾಖೆಯಲ್ಲಿನ ಹಲವು ಯೋಜನೆಗಳ ಬಗ್ಗೆ ಪ್ರತಿ ಮನೆಗೆ ಮಾಹಿತಿ ತಲುಪಿಸಿ ಪ್ರತಿಯೊಬ್ಬರು ಇದರ ಪ್ರಯೋಜನ ಪಡೆದುಕೊಳ್ಳುವ ನಿಟ್ಟಿನಲ್ಲಿ ಚಟುವಟಿಕೆ ಹಮ್ಮಿಕೊಳ್ಳೋಣ ಎಂದರು.

ಮುಕ್ಕೂರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಮಾತನಾಡಿ, ಮುಕ್ಕೂರು ಶಾಖಾ ಅಂಚೆ ಕಚೇರಿಯಲ್ಲಿ 200 ಖಾತೆಗಳ ಅಗತ್ಯ ಇದ್ದು ಈಗ 60 ಅಕೌಂಟ್ ಮಾತ್ರ ಇದೆ. ಕೇವಲ 10 ಶೇ. ವ್ಯವಹಾರ ನಡೆಯುತಿದ್ದು ಶೇ.90 ರಷ್ಟು ಹಿನ್ನಡೆಯಲ್ಲಿದೆ ಎನ್ನುವ ಬಗ್ಗೆ ಅಂಚೆ ಸಿಬಂದಿಗಳು ಮಾಹಿತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಗತಿಪರ ಕೃಷಿಕ ಸತ್ಯಪ್ರಸಾದ್ ಕಂಡಿಪ್ಪಾಡಿ, ಮುಕ್ಕೂರು ಶಾಲಾ ಹಿತ ಚಿಂತನಾ ಸಮಿತಿಯ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಗುಡ್ಡಪ್ಪ ಗೌಡ ಅಡ್ಯತಕಂಡ, ಕುಶಾಲಪ್ಪ ಗೌಡ ಪೆರುವಾಜೆ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಚೆ ಕಚೇರಿಗೆ ಸ್ಥಳೀಯ ಹೆಸರು :

ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿರುವ ಅಂಚೆ ಕಚೇರಿಗೆ ಪೆರುವಾಜೆ ಅಂಚೆ ಕಚೇರಿ ಎಂಬ ಹೆಸರು ಇದ್ದು, ಅದನ್ನು ಮುಕ್ಕೂರು ಅಂಚೆ ಕಚೇರಿ ಎಂದು ಬದಲಾಯಿಸುವ ಮೂಲಕ ಸ್ಥಳೀಯ ಪರಿಸರದ ಹೆಸರಿಗೆ ಮನ್ನಣೆ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈ ಹಿಂದೆ ಶಾಲೆ, ಸೊಸೈಟಿ, ಅಂಚೆ ಕಚೇರಿಗಳು ಮುಕ್ಕೂರು ಎಂಬ ಹೆಸರಿನಿಂದಲೇ ಗುರುತಿಸಿಕೊಂಡಿತ್ತು,. ಅಂಚೆ ವಿಳಾಸದಲ್ಲಿಯು ಮುಕ್ಕೂರು ಎಂದು ಉಲ್ಲೇಖಿಸಲಾಗುತಿದ್ದು, ಅಂಚೆ ಕಚೇರಿ ಕೂಡ ಅದೇ ಹೆಸರಿನಲ್ಲಿ ಗುರುತಿಸಿಕೊಂಡಲ್ಲಿ ಆಗ ಒಂದೇ ಗ್ರಾಮದಲ್ಲಿ ಒಂದೇ ಹೆಸರಿನ ಎರಡು ಅಂಚೆ ಕಚೇರಿ ಇರುವ ಅನಿವಾರ್ಯತೆ ತಪ್ಪಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ಕೇಳಿ ಬಂತು.

ಖಾತೆ ತೆರೆದು ವೈದ್ಯರ ಪ್ರೋತ್ಸಾಹ :

ಈ ಸಂದರ್ಭದಲ್ಲಿ ಕಾನಾವು ಕ್ಲಿನಿಕ್‍ನ ಡಾ.ನರಸಿಂಹ ಶರ್ಮಾ ಕಾನಾವು ಅವರು ಮುಕ್ಕೂರು ಅಂಚೆ ಕಚೇರಿಯಲ್ಲಿ 16 ಖಾತೆ ತೆರೆದು, ಇನ್ನು ಕೆಲವರನ್ನು ಸಂಪರ್ಕಿಸಿ ಖಾತೆ ತೆರೆಯಲು ಸಹಕಾರ ನೀಡುವುದಾಗಿ ತಿಳಿಸುವ ಮೂಲಕ ಅಂಚೆ ಉಳಿಸುವ ಅಭಿಯಾನಕ್ಕೆ ಪ್ರೋತ್ಸಾಹ ನೀಡಿದರು.

ಕರಪತ್ರ ಬಿಡುಗಡೆ :

ಅಂಚೆ ಇಲಾಖೆಯಲ್ಲಿನ ಸೌಲಭ್ಯಗಳ ಕುರಿತಂತೆ ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲದ ವತಿಯಿಂದ ಮಾಡಲಾದ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು, ಮುಕ್ಕೂರು ಶಾಲಾ ಎಸ್‍ಡಿಎಂಸಿ ಉಪಾಧ್ಯಕ್ಷೆ ಸುಮತಿ ರೈ, ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ಕಾರ್ತಿಕ್ ರೈ ಕನ್ನೆಜಾಲು, ರಘುನಾಥ ಶೆಟ್ಟಿ ಬರಮೇಲು, ಕಿರಣ್ ಗೌಡ ಚಾಮುಂಡಿಮೂಲೆ, ಲತಾ ಕೆ.ಎಸ್., ಲಲಿತಾ ಪಿ.ಬಿ., ಸತ್ಯಪ್ರಭಾ ಬಿ, ಯಶೋಧ ಬಿ, ನಮೃತಾ ಬಿ, ರೂಪಾನಂದ ತಂಗುಮೂಲೆ, ರವಿ ಕುಂಡಡ್ಕ, ದೇವಕಿ ಪಿ.ಮುಕ್ಕೂರು, ಸಚಿನ್ ರೈ ಪೂವಾಜೆ, ರಾಮಚಂದ್ರ ಚೆನ್ನಾವರ, ನಂದಿತಾ ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top