ಅನನ್ಯತೆ ನಿಮ್ಮದೇ ಬ್ರಾಂಡ್ ಆಗಲಿ : ನಿಮ್ಮ ಹಾಗೆ ಜಗತ್ತಿನಲ್ಲಿ ಬೇರೆ ಯಾರೂ ಇರಲು ಸಾಧ್ಯವಿಲ್ಲ

ಏಷಿಯಾನೆಟ್ ಸುವರ್ಣಾ ವಾಹಿನಿಯ ಸ್ಟಾರ್ ಆಂಕರ್ ಭಾವನಾ ನಾಗಯ್ಯ ನಡೆಸಿಕೊಡುವ ಒಂದು ಮಿನಿ ಟಿವಿ ಶೋ ಅದ್ಭುತವಾಗಿ ಇರುತ್ತದೆ. ಅದರಲ್ಲಿ ಒಬ್ಬ ಸೆಲೆಬ್ರಿಟಿ ಸಾಧಕರನ್ನು ಕರೆದು ಕ್ಯಾಮೆರಾ ಮುಂದೆ ಕೂರಿಸಿ ಆಕೆ 60 ಸೆಕೆಂಡ್ ಅವಧಿಯಲ್ಲಿ 12-15 ಮೊನಚು ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸೆಲೆಬ್ರಿಟಿ ಸಾಧಕರು ಒಂದೊಂದು ವಾಕ್ಯದಲ್ಲಿ ಚುಟುಕಾಗಿ ಉತ್ತರಿಸಬೇಕು. ಆ ಪ್ರಶ್ನೆಗಳನ್ನು ಮೊದಲಾಗಿ ಕೊಡದೇ ಸ್ಥಳದಲ್ಲಿಯೇ ಕೇಳುವ ಕಾರಣ ಕಾರ್ಯಕ್ರಮ ತುಂಬಾ ರೋಚಕ ಆಗಿರುತ್ತದೆ.
ಈ ಬಾರಿ ಆ ಶೋಗೆ ಮುಖಾಮುಖಿ ಆದವರು ರಿಯಲ್ ಸ್ಟಾರ್ ಉಪೇಂದ್ರ. ಅವರು ಕನ್ನಡದ ಬುದ್ಧಿವಂತ ನಟ ಎಂದು ನೂರಾರು ಬಾರಿ ಪ್ರೂವ್ ಆಗಿದೆ. ಇಲ್ಲಿ ಕೂಡ ಉಪೇಂದ್ರ ಭಾವನಾ ಕೇಳಿದ ಹರಿತವಾದ ಪ್ರಶ್ನೆಗೆ ಒಂದಿಷ್ಟೂ ಯೋಚನೆ ಮಾಡದೆ ಥಟ್ಟನೆ ಉತ್ತರ ಕೊಡುತ್ತಾ ಹೋದರು. ಅದರ ಕೊನೆಯ ಭಾಗದಲ್ಲಿ ಉಪೇಂದ್ರ ಅವರ ಬುದ್ಧಿವಂತಿಕೆ ನನಗೆ ಭಾರಿ ಖುಷಿ ಕೊಟ್ಟಿತು.

ಒಂದೇ ವಾಕ್ಯದಲ್ಲಿ ಅಭಿಪ್ರಾಯ ತಿಳಿಸಿ ಎಂಬ ಪ್ರಶ್ನೆ

ಪ್ರಶ್ನೆ – ನರೇಂದ್ರ ಮೋದಿ?
ಉತ್ತರ – ನರೇಂದ್ರ ಮೋದಿ!
ಪ್ರಶ್ನೆ – ರಾಹುಲ್ ಗಾಂಧಿ?
ಉತ್ತರ – ರಾಹುಲ್ ಗಾಂಧಿ!
ಪ್ರಶ್ನೆ – ಪ್ರಜಾಕೀಯ?
ಉತ್ತರ – ಪ್ರಜಾಕೀಯ!
ಪ್ರಶ್ನೆ – ಉಪೇಂದ್ರ?
ಉತ್ತರ – ಉಪೇಂದ್ರ!
ಈ ನಾಲ್ಕೇ ಉತ್ತರಗಳಲ್ಲಿ ಉಪೇಂದ್ರ ಅವರು ಒಂದು ಅದ್ಭುತವಾದ ಸಂದೇಶವನ್ನು ಕೊಟ್ಟಾಗಿತ್ತು. ಎಲ್ಲಿಯೂ ಭಾವಾವೇಶಕ್ಕೆ ಒಳಗಾಗದೆ ತಣ್ಣಗಿನ ಧ್ವನಿಯಲ್ಲಿ ಅವರು ನೀಡಿದ ಉತ್ತರ ಮತ್ತು ಅವರು ಉತ್ತರ ನೀಡಿದ ರೀತಿ ಲಕ್ಷಾಂತರ ಕನ್ನಡಿಗರಿಗೆ ಇಷ್ಟವಾಗಿದೆ.































 
 

ಅನನ್ಯತೆ ಎನ್ನುವುದೇ ನಮ್ಮ ಸಾಮರ್ಥ್ಯ

ಜಗತ್ತಿನಲ್ಲಿ ನಾವು ಪ್ರತಿಯೊಬ್ಬರೂ ಅನನ್ಯ ವ್ಯಕ್ತಿಗಳು. ಒಬ್ಬರ ಹಾಗೆ ಒಬ್ಬರು ಇರಲು ಸಾಧ್ಯವೇ ಇಲ್ಲ. ಒಂದೇ ತಾಯಿಯ ಗರ್ಭದಿಂದ ಈ ಲೋಕದ ಬೆಳಕನ್ನು ಕಂಡ ಅವಳಿ ಮಕ್ಕಳು ಕೂಡ ಶೇ.20-25ರಷ್ಟು ಭಿನ್ನವಾಗಿ ಇರುತ್ತಾರೆ. ಅವಳಿಗಳಲ್ಲಿ ದೈಹಿಕವಾಗಿ ತುಂಬಾ ಹೋಲಿಕೆ ಇದ್ದರೂ ಮಾನಸಿಕವಾಗಿ, ಯೋಚನಾ ವಿಧಾನದಲ್ಲಿ, ಗ್ರಹಿಕೆಯಲ್ಲಿ ಮತ್ತು ಭಾವನೆಗಳಲ್ಲಿ ಭಿನ್ನತೆ ಖಂಡಿತವಾಗಿ ಇರುತ್ತದೆ. ನೀವು ಯೋಚನೆ ಮಾಡಿದ ಹಾಗೆ ಜಗತ್ತಿನಲ್ಲಿ ಬೇರೆ ಯಾರೂ ಯೋಚಿಸಲು ಸಾಧ್ಯವೇ ಇಲ್ಲ. ಅದೇ ರೀತಿ ಒಂದು ಘಟನೆಗೆ ನಾವು ಕೊಡುವ ಸ್ಪಂದನೆ ಕೂಡ ಭಿನ್ನವಾಗಿರುತ್ತದೆ.
ನಮ್ಮ ಅನನ್ಯ ಯೋಚನಾ ವಿಧಾನ

ಉದಾಹರಣೆಗೆ ಒಬ್ಬನಿಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು ಎಂಬ ಸುದ್ದಿಗೆ ಹಲವು ಮಂದಿಯ ಸ್ಪಂದನೆಯ ಲಹರಿಯು ಹೀಗೆಲ್ಲ ಇರಬಹುದು.

1)ಅಭಿನಂದನೆ ಅವನಿಗೆ. ಅವನು ಆ ಪ್ರಶಸ್ತಿಗೆ ತುಂಬಾ ವರ್ಥ್ ಆಗಿದ್ದಾನೆ

2) ಪ್ರಶಸ್ತಿ ಸಿಗದೆ ಏನು? ರಾಜಕೀಯದವರ ಹಿಂದೆ ಓಡಾಡಿದರೆ ಇಂತಹ ನೂರು ಪ್ರಶಸ್ತಿ ದೊರೆಯಬಹುದು

3)ನನಗೂ ಬಿಡ್ಡಿಂಗ್ ಮಾಡಲು ಆಫರ್ ಬಂದಿತ್ತು, ನಾನೇ ಬೇಡ ಅಂದಿದ್ದೆ

4) ಅವನಿಗೆ ಪ್ರಶಸ್ತಿ ಬಂದ ಕಾರಣ ಪ್ರಶಸ್ತಿಯ ಮೌಲ್ಯ ಹೆಚ್ಚಾಯಿತು

5) ದುಡ್ಡು ಕೊಟ್ಟರೆ ಇಂತಹ ನೂರು ಪ್ರಶಸ್ತಿಗಳು ದೊರೆಯಬಹುದು. ನೊಬೆಲ್ ಬಹುಮಾನ ಕೂಡ ಮಾರಾಟಕ್ಕೆ ಇದೆಯಂತೆ

6) ಪುಣ್ಯಾತ್ಮ ತುಂಬಾ ವರ್ಷಗಳಿಂದ ಪ್ರಶಸ್ತಿಯ ಹಿಂದೆ ಬಿದ್ದಿದ್ದ. ಈ ವರ್ಷ ದೊರೆಯದಿದ್ದರೆ ಹುಚ್ಚೇ ಹಿಡಿಯುತ್ತಿತ್ತು.

7) ಈ ವರ್ಷ ಜಾತಿಯ ಮೇಲೆ ಅವಾರ್ಡ್ ಹಂಚಿಕೆ ಆಗಿದೆಯಂತೆ. ನಾನಂತೂ ಲಾಬಿ ಮಾಡಲು ಹೋಗಲಿಲ್ಲ.

8) ಆ ಮನುಷ್ಯನಿಗೆ ಯಾವಾಗಲೋ ಅವಾರ್ಡ್ ಬರಬೇಕಾಗಿತ್ತು. ಲೇಟ್ ಆದರೂ ಸಿಕ್ಕಿತಲ್ಲ

9) ಅವನಿಗೆ ಕೊಟ್ಟ ಕಾರಣ ಪ್ರಶಸ್ತಿಯ ಮೌಲ್ಯವೇ ಹೊರಟು ಹೋಯ್ತು

10) ಯೋಗ್ಯತೆ ಮತ್ತು ಯೋಗ ಎರಡೂ ಇದ್ದರೆ ಮಾತ್ರ ಪ್ರಶಸ್ತಿ ಸಿಗುವುದು ಎಂದು ಈಗಾದರೂ ಗೊತ್ತಾಯ್ತಲ್ಲ

ಹೀಗೆ ನೂರು ಮಂದಿ ನೂರಾರು ರೀತಿ ಯೋಚನೆ ಮಾಡುತ್ತಾರೆ. ಅವರವರ ಮೂಗಿನ ನೇರಕ್ಕೆ ಮಾತಾಡುವವರು ಹೆಚ್ಚು. ನಮ್ಮ ಯೋಚನೆಗಳು ನಮ್ಮನ್ನು ರೂಪಿಸುತ್ತವೆ. ಪಾಸಿಟಿವ್ ಯೋಚನೆಗಳು ನಮ್ಮನ್ನು ಪಾಸಿಟಿವ್ ವ್ಯಕ್ತಿಯಾಗಿ ಮಾಡಿದರೆ ನೆಗೆಟಿವ್ ಯೋಚನೆಗಳು ನಮ್ಮನ್ನು ನೆಗೆಟಿವ್ ವ್ಯಕ್ತಿಯಾಗಿ ರೂಪಿಸುತ್ತವೆ.

ನಮ್ಮ ಭಿನ್ನ ಭಿನ್ನ ಗ್ರಹಿಕೆಗಳು

ಉದಾಹರಣೆಗೆ ನಾನು ಗೀತಾ ಎಂಬ ಶಬ್ದವನ್ನು ಹೇಳಿದರೆ ಕೆಲವರಿಗೆ ಭಗವದ್ಗೀತಾ ನೆನಪಾದರೆ ಇನ್ನೂ ಕೆಲವರಿಗೆ ಭಾವಗೀತೆ ನೆನಪಾಗಬಹುದು. ಇನ್ನೂ ಹಲವರಿಗೆ ಗೀತಾ ಎಂಬ ಹುಡುಗಿ ನೆನಪಾಗಬಹುದು. ಕೆಲವರಿಗಾದರೂ ಶಂಕರನಾಗ್ ಅಭಿನಯ ಮಾಡಿದ ಗೀತಾ ಸಿನೆಮಾ ನೆನಪಾಗಬಹುದು.
ಇದು ನಮ್ಮ ಗ್ರಹಿಕೆಯ ಅಭಿವ್ಯಕ್ತಿ. ಪ್ರತಿಯೊಬ್ಬರ ಗ್ರಹಿಕೆಯ ಅಂಶ ಕೂಡ ಭಿನ್ನವಾಗಿರುತ್ತದೆ. ಅದಕ್ಕೆ ಕಾರಣ ನಮ್ಮ ಯೋಚನಾ ವಿಧಾನ. ನಮ್ಮ ಬಾಲ್ಯದ ಅನುಭವಗಳು, ನಮ್ಮ ಅಧ್ಯಯನ ಮತ್ತು ನಮ್ಮ ಗೆಳೆಯರ ಪ್ರಭಾವಗಳು ನಮ್ಮಲ್ಲಿ ಬೇರೆ ಬೇರೆ ಗ್ರಹಿಕೆಗಳನ್ನು ರೂಪಿಸುತ್ತವೆ.

ನಮ್ಮ ಭಾವನೆಗಳು ಕೂಡ ಭಿನ್ನವಾಗಿರುತ್ತವೆ

ರಸ್ತೆಯಲ್ಲಿ ಅಪಘಾತ ಆಗಿ ಒಂದು ನಾಯಿ ಸತ್ತು ಬಿದ್ದಿದೆ ಎಂದಾಗ ಹಲವರ ಭಾವನೆಗಳು ಅಭಿವ್ಯಕ್ತ ಆಗುವ ರೀತಿಯೂ ಬೇರೆ ಬೇರೆ ಆಗಿರುತ್ತದೆ.

1) ಅಯ್ಯೋ ಪಾಪ… ಒಳ್ಳೆಯ ನಾಯಿ ಕಣ್ರೀ

2) ಆ ಮನೆಯ ಯಜಮಾನ ಕಟ್ಟಿ ಹಾಕಿದ್ರೆ ನಾಯಿ ಸಾಯ್ತಾ ಇರಲಿಲ್ಲ

3) ಅಷ್ಟೊಂದು ವೇಗವಾಗಿ ಗಾಡಿ ಓಡಿಸುವ ಅಗತ್ಯ ಇತ್ತಾ? ಹಿಟ್ ಆಂಡ್ ರನ್ ಅಂತೆ

4) ಪುರಸಭೆಯವರು ಯಾವಾಗ ಬಂದು ನಾಯಿಯ ಹೆಣವನ್ನು ತೆಗೀತಾರೋ

5) ಆ ನಾಯಿ ಸಿಕ್ಕಿದವರ ಹಿಂದೆ ಹೋಗುತ್ತಿತ್ತು. ಮೊನ್ನೆ ಯಾರಿಗೋ ಕಚ್ಚಿತಂತೆ

ಹೀಗೆ ನೂರಾರು ಅಭಿಪ್ರಾಯಗಳು ನಮ್ಮ ಭಾವನೆಗಳನ್ನು ಅಭಿವ್ಯಕ್ತ ಮಾಡುತ್ತವೆ. ನಾವು ಅದರಲ್ಲಿ ಕೂಡ ಅನನ್ಯವೇ ಆಗಿದ್ದೇವೆ.

ನಮ್ಮ ಅನನ್ಯತೆ ನಮ್ಮ ಬಂಡವಾಳ ಆಗಬೇಕು

ನಾವು ಬೇರೆಯವರಿಗಿಂತ ಭಿನ್ನವಾಗಿರುವುದು ನಮ್ಮ ಬ್ರಾಂಡ್. ಈ ಅನನ್ಯತೆ ನಮ್ಮ ಬಂಡವಾಳ ಆಗಬೇಕು. ಕ್ರಿಯೇಟಿವ್ ಆಗಿ ಯೋಚನೆ ಮಾಡುವ ಮಂದಿ ತಮ್ಮ ಅನನ್ಯತೆಯನ್ನು ಬಂಡವಾಳ ಮಾಡಿಕೊಂಡು ಬೇಗ ಯಶಸ್ಸು ಪಡೆಯುತ್ತಾರೆ.
ರೆನಾಲ್ಡ್ ಕಂಪನಿಯ ಬಾಲ್ ಪೆನ್, ಅಜಂತಾ ಕಂಪನಿಯ ಗೋಡೆ ಗಡಿಯಾರ, ಟೈಟಾನ್ ಕಂಪನಿಯ ಕೈ ಗಡಿಯಾರ, ಆಪಲ್ ಕಂಪನಿಯ ಐ ಫೋನ್, ಖೈತಾನ್ ಕಂಪನಿಯ ಸೀಲಿಂಗ್ ಫ್ಯಾನ್, ಫಿಲಿಪ್ಸ್ ಕಂಪನಿಯ ಎಲೆಕ್ಟ್ರಾನಿಕ್ ವಸ್ತುಗಳು ಇಂದು ಕೂಡ ಜಗತ್ತನ್ನು ಆಳುತ್ತಿರಲು ಈ ಅನನ್ಯತೆಯ ಗುಣವೇ ಕಾರಣ. ಅವರು ಬೇರೆ ಕಂಪನಿಯ ಮಂದಿಗಿಂತ ಭಿನ್ನವಾಗಿ ಯೋಚನೆ ಮಾಡಿದ ಕಾರಣ ಇಂದಿಗೂ ಮಾರ್ಕೆಟನ್ನು ರೂಲ್ ಮಾಡುತ್ತಿದ್ದಾರೆ.
ನಮ್ಮ ಅನನ್ಯತೆಯು ನಮ್ಮ ಬ್ರಾಂಡ್ ಆಗೋದು ಯಾವಾಗ?
✒️ ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top