ಪುತ್ತೂರು : ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆಯ ವತಿಯಿಂದ ಶೌರ್ಯ ಯಾತ್ರೆ ಭಾನುವಾರ ನಡೆಯಿತು.
ನಗರದ ದಬೆ ವೃತ್ತದಿಂದ ಹೊರಟ ಶೌರ್ಯ ಯಾತ್ರೆ ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಸಮಾಪನಗೊಂಡಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|ಕಲ್ಲಡ್ಕ ಪ್ರಭಾಕರ್ ಭಟ್ ದಿಕ್ಸೂಚಿ ಭಾಷಣ ಮಾಡಿ, ಭಾರತದಲ್ಲಿ ವೀರತ್ವ, ಪರಾಕ್ರಮ ಮೆರೆದವರ ಇತಿಹಾಸವನ್ನು ಮಕ್ಕಳಿಗೆ ತಿಳಿಸಲಾಗದ ವಾತಾವರಣವನ್ನು ಮೆಕಾಲೆ ಶಿಕ್ಷಣ ವ್ಯವಸ್ಥೆ ಮಾಡಿತ್ತು. ಶಿವಾಜಿಯಂತಹ ಅಪ್ರತಿಮ ದೇಶಭಕ್ತರ ಇತಿಹಾಸವನ್ನು ಮುಚ್ಚಿ ಹಾಕಿ ಔರಂಗಬೇಬ್‌ನಂತಹವರನ್ನು ವೈಭವೀಕರಿಸಲಾಯಿತು. ತನ್ಮೂಲಕ ಸುಳ್ಳಿನ ಇತಿಹಾಸವನ್ನು ಜನರ ಮುಂದಿಡುವ ಪ್ರಯತ್ನ ನಡೆದದ್ದು ದುರಂತ ಎಂದರು.
ಧರ್ಮದ ಶಿಕ್ಷಣ ತೆರೆಮರೆಗೆ ಬಂದ ಪರಿಣಾಮ ತಪ್ಪಾದ ಚರಿತ್ರೆಯನ್ನೇ ಜನ ನಂಬುವ ಸ್ಥಿತಿಗೆ ತಲುಪಿತು. ದೇಶದ ನಿಜವಾದ ಚರಿತ್ರೆಯನ್ನು ಜನರ ಮುಂದಿಡುವ ಕಾಲಘಟ್ಟವೀಗ ಬಂದಿದೆ ಎಂದ ಅವರು, ಮೆಕಾಲೆ ಶಿಕ್ಷಣ ಪದ್ಧತಿಯಿಂದ ನಾವು ದಾಸ್ಯಕ್ಕೆ ಒಳಗಾಗಬೇಕಾದ ಸ್ಥಿತಿ ಉಂಟಾಯಿತು. ಅವರು ಹೇಳಿದ್ದೆ ಸತ್ಯ ಎಂಬ ನಂಬುವ ಸ್ಥಿತಿ ಉಂಟಾಯಿತು. ವಿಜ್ಞಾನ ಅಂದರೆ ವಿದೇಶಿಯರದ್ದು ಅನ್ನುವ ಭಾವನೆ ಬಿತ್ತುವ ಕೆಲಸ ನಡೆದಿತ್ತು. ಭಾರತ ದೇಶದ ನಿಜವಾದ ಇತಿಹಾಸವನ್ನು ನಮ್ಮ ಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕು ಎಂದರು.
ವೇದಿಕೆಯಲ್ಲಿ ವಿಶ್ವ ಹಿಂದು ಪರಿಷದ್ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಡೆ, ಬಜರಂಗದಳ ಪ್ರಾಂತ ಸಂಯೋಜಕ್ ಸುನೀಲ್ ಕೆ.ಆರ್., ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ್ ಭುಜಂಗ ಕುಲಾಲ್, ವಿಶ್ವ ಹಿಂದು ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ|ಕೃಷ್ಣಪ್ರಸನ್ನ ಉಪಸ್ಥಿತರಿದ್ದರು.
ಬಜರಂಗದಳದ ಮುರಳಿಕೃಷ್ಣ ಹಸಂತಡ್ಕ ಪ್ರಸ್ತಾವನೆಗೈದರು. ಶ್ರೀಲಕ್ಷ್ಮಿವೈಯಕ್ತಿಕ ಗೀತೆ ಹಾಡಿದರು. ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲ್ ಸ್ವಾಗತಿಸಿದರು. ವಿಶಾಖ್ ಸಸಿಹಿತ್ಲು ನಿರೂಪಿಸಿದರು.