ಬಿಜೆಪಿ ಎಸ್‌ಟಿ ಮೋರ್ಚಾದ ಜಿಲ್ಲಾ ಸಮಾವೇಶ  

ಪುತ್ತೂರು : ಬಿಜೆಪಿ ಎಸ್ ಟಿ ಮೋರ್ಚಾದ ಜಿಲ್ಲಾ ಸಮಾವೇಶ ಭಾನುವಾರ ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.  

ಸಮಾವೇಶವನ್ನು ಉದ್ಘಾಟಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿ, ಕೇವಲ ಅಧಿಕಾರ ಗದ್ದುಗೆಯ ಉದ್ದೇಶ ಇಟ್ಟುಕೊಂಡು ಬಿಜೆಪಿ ಪಕ್ಷ ಸ್ಥಾಪನೆಯಾಗಿಲ್ಲ. ಇದಕ್ಕೆ ಹೊರತಾಗಿ ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ ಸಂಕಲ್ಪ ತೊಟ್ಟಿರುವ ಏಕೈಕ ಪಕ್ಷ ಇದ್ದರೆ ಅದು ಬಿಜೆಪಿ ಪಕ್ಷ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ ಹೇಳಿದರು.

ಸಾಮಾಜಿಕ ನ್ಯಾಯ ನೀಡಲು ಪೂರಕವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತುಗಳು ಸಿಗಬೇಕು ಎಂಬ ಸಿದ್ಧಾಂತದ ಪ್ರತಿಪಾದನೆಯೊಂದಿಗೆ ಬಿಜೆಪಿ ಆಡಳಿತ ನಡೆಸುತ್ತಿದ್ದು, ಸಂಕಲ್ಪವನ್ನು ಆಡಳಿತದಲ್ಲಿ ಅನುಷ್ಠಾನ ಮಾಡಿದೆ ಎಂದ ಅವರು, ಎಸ್‌ಟಿ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ದೃಷ್ಟಿಯಿಂದ ಎಸ್ಟಿ ಸಮಾಜದ ಮೀಸಲಾತಿಯನ್ನು 3 ಶೇ.ದಿಂದ 7 ಶೇ.ಕ್ಕೆ ಏರಿಸಿದೆ, 75 ಯೂನಿಟ್ ಉಚಿತ್ ವಿದ್ಯುತ್ ನೀಡಿದೆ, ಎಲ್ಲಾ ತಾಲೂಕುಗಳಲ್ಲಿ ಎಸ್‌ಟಿ ಸಮುದಾಯಕ್ಕೆ ವಸತಿ ನಿಲಯ ನಿರ್ಮಾಣದ ಯೋಜನೆ ಹಾಕಿಕೊಂಡು ಚುನಾವಣೆ ಹಿನ್ನಲೆಯಲ್ಲಿ ಎಸ್‌ಟಿ ಸಮಾಜ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದೇಶ ಸಮಾವೇಶದ ಮೂಲಕ ಸಿಕ್ಕಿದೆ ಎಂದು ತಿಳಿಸಿದರು.































 
 

ದೇಶದ ಸನಾತನ ಧರ್ಮವನ್ನು ಉಳಿಸುವಲ್ಲಿ ಎಸ್‌ಟಿ ಸಮುದಾಯದ ಪಾತ್ರ ಮಹತ್ವ :

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮುಖ್ಯ ಭಾಷಣ ಮಾಡಿ, ಈ ಬಾರಿಯ ಚುನಾವಣೆಯಲ್ಲಿ  ಕರ್ನಾಟಕದಲ್ಲಿ 150 ಕ್ಕೂ ಹೆಚ್ಚು ಶಾಸಕರೊಂದಿಗೆ ಅಧಿಕಾರ ವಹಿಸಿ ಇತಿಹಾಸ ನಿರ್ಮಿಸಲಿದೆ. ಅಲ್ಲದೆ ದ.ಕ.ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರದ ಪೈಕಿ ಎಂಟು ಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈಶಾನ್ಯ ರಾಜ್ಯದ ಚುನಾವಣೆಯಿಂದ ಈ ವಿಶ್ವಾಸ ಬಂದಿದೆ. ಮುಂದಿನ ಚುನಾವಣೆಯನ್ನು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತಗೊಳಿಸಬೇಡಿ. ದೇಶದ ಸನಾತನ ಸಂಸ್ಕೃತಿಯನ್ನು ಉಳಿಸುವಲ್ಲಿ ಎಸ್‌ಟಿ ಸಮುದಾಯದ ಪಾತ್ರ ಮಹತ್ವವಾಗಿದ್ದು, ಇಂದಿನ ಸಮಾವೇಶದ ಮೂಲಕ ಎಸ್‌ಟಿ ಸಮುದಾಯದವರು ಬಿಜೆಪಿಯೊಂದಿಗಿದ್ದಾರೆ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.

ಗಂಗಾ ಕಲ್ಯಾಣ ಯೋಜನೆಯಲ್ಲಿ ಪುತ್ತೂರು ಕ್ಷೇತ್ರಕ್ಕೆ ಎಸ್‌ಟಿ ಪಂಗಡದವರಿಗೆ ನೂರು ಬೋರ್‌ವೆಲ್ :

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು, ಜಾತಿ-ಮತ ನೋಡದೇ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಗೌರವಿಸಿದ ವ್ಯಕ್ತಿ ಇದ್ದರೆ ಅದು ದೇಶದ ಪ್ರಧಾನಿ ನರೇಂದ್ರ ಮೋದಿ. ಪ್ರಸ್ತುತ ಮರಾಠಿ ಸಮುದಾಯದವರು ಉದ್ಯಮ ಆರಂಭಿಸುವ ನಿಟ್ಟಿನಲ್ಲಿ ಮರಾಠಿ ಜನಾಂಗಕ್ಕೆ  ಪಿಟಿಸಿಎಲ್ ಆಕ್ಟ್ ಮೂಲಕ ಭೂಪರಿವರ್ತನೆಗೆ ಅವಕಾಶ ನೀಡುವ ಮೂಲಕ ಸಮಸ್ಯೆ ಬಗೆಹರಿಸುವಲ್ಲಿ ಬಿಜೆಪಿ ಸರಕಾರ ಪ್ರಯತ್ನಿಸಿದೆ. ಈ ಬಾರಿಯ ಬಜೆಟ್ ನಲ್ಲಿ ಎಸ್‌ಟಿ ಸಮುದಾಯ ಶೈಕ್ಷಣಿಕ, ಆರ್ಥಿಕವಾಗಿ, ಔದ್ಯಮಿಕವಾಗಿ ಬೆಳೆಯಲು ೩೭ ಸಾವಿರ ಕೋಟಿ ಅನುದಾನ ನೀಡಿದೆ ಎಂದ ಅವರು, ಗಂಗಾ ಕಲ್ಯಾಣ ಯೋಜನೆಯಲ್ಲಿ ಪುತ್ತೂರು ಕ್ಷೇತ್ರದ ಪರಿಶಿಷ್ಟ ಪಂಗಡಕ್ಕೆ ನೂರು ಬೋರ್‌ವೆಲ್‌ಗಳನ್ನು ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.

ಬಿಜೆಪಿ ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಚುನಾವಣಾ ಪ್ರಭಾರಿ ರಾಜೇಶ್ ಕಾವೇರಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಕಸ್ತೂರಿ ಪಂಜ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕಾರ್ಯದರ್ಶಿ ಜಯಶ್ರೀ ಕರ್ಕೇರ, ಸಹಸಂಚಾಲಕ ಸಂದೇಶ್ ಶೆಟ್ಟಿ, ಒಬಿಸಿ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ, ಎಸ್‌ಟಿ ಮೋರ್ಚಾದ ತಾಲೂಕು ಅಧ್ಯಕ್ಷ ಶಿವಪ್ಪ ನಾಯ್ಕ, ನಗರ ಎಸ್‌ಟಿ ಮೋರ್ಚಾ ಅಧ್ಯಕ್ಷ ಅಶೋಕ್, ಸುಳ್ಯ ಅಧ್ಯಕ್ಷ ಐತ್ತಪ್ಪ ನಾಯ್ಕ, ಮಂಗಳೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಬಿಜತ್ರೆ ಸ್ವಾಗತಿಸಿದರು. ಎಸ್‌ಟಿ ಮೋರ್ಚಾ ನಗರ ಮಂಡಲ ಅಧ್ಯಕ್ಷ ಅಶೋಕ್ ಕುಮಾರ್ ಬಲ್ನಾಡು ವಂದಿಸಿದರು. ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ ರಾವ್ ಬಪ್ಪಳಿಗೆ, ಕರುಣಾಕರ ಮುಂಡೋವುಮೂಲೆ, ಸುಮಿತ್ರ ಕಾರ್ಯಕ್ರಮ ನಿರೂಪಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top