ಪುತ್ತೂರು: ಬೂತ್ ಮಟ್ಟದಲ್ಲಿ ಜಯ ಪಡೆದರೆ ಮಾತ್ರ ನಾವು ದೇಶದಲ್ಲಿ ಜಯ ಗಳಿಸಬಹುದು ಎಂದು ಅಮಿತ್ ಶಾ ಹೇಳಿದ್ದಾರೆ. ಅದರಂತೆ ಆರ್ಯಾಪು ಗ್ರಾಮ ಪಂಚಾಯತ್ ಬೂತ್ ಮಟ್ಟದಲ್ಲಿ ನಾವು ಜಯ ಗಳಿಸಿದ್ದು, ಇದು ರಾಜ್ಯ ಮತ್ತು ರಾಷ್ಟ್ರಕ್ಕೆ ದಿಕ್ಸೂಚಿಯಾಗಿರಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಆರ್ಯಾಪು ಗ್ರಾಮ ಪಂಚಾಯತಿನ ಉಪಚುನಾವಣೆಯಲ್ಲಿ ಜಯ ಗಳಿಸಿದ ಯತೀಶ್ ದೇವ ಅವರ ಮನೆಯಲ್ಲಿ ಏರ್ಪಡಿಸಿದ್ದ ಅಭಿನಂದನೆ ಹಾಗೂ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.
ಮೆಂಬರ್ ಆಫ್ ಪಾರ್ಲಿಮೆಂಟ್ ಅವರಿಗೂ ಎಂ.ಪಿ. ಎನ್ನುತ್ತೇವೆ. ಮೆಂಬರ್ ಆಫ್ ಪಂಚಾಯತಿಗೂ ಎಂ.ಪಿ. ಎನ್ನುತ್ತೇವೆ. ಅಂದರೆ ಬಿಜೆಪಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಎಂದರೆ ಸಣ್ಣ ಹುದ್ದೆ ಎಂದು ಭಾವಿಸಬೇಡಿ. ಬಿಜೆಪಿಯಲ್ಲಿ ಸಂಸದ, ಶಾಸಕರಿಗಿರುವಷ್ಟೇ ಸ್ಥಾನಮಾನ ಗ್ರಾಮ ಪಂಚಾಯತ್ ಸದಸ್ಯರಿಗೂ ನೀಡಿದ್ದೇವೆ. ಆದ್ದರಿಂದ ಮುಂದೆ ಯತೀಶ್ ದೇವ ಅವರು ಈ ವಾರ್ಡಿನ ಪ್ರತಿ ಮನೆಮನೆಗೂ ಹೋಗಿ, ಮತದಾರರಿಗೆ ಕೃತಜ್ಞತೆ ಹೇಳಬೇಕು. ಅವರ ಸಮಸ್ಯೆಗಳನ್ನು ಆಲಿಸಬೇಕು. ಆಗ ಜನರು ನಮ್ಮ ಮೇಲೆ ವಿಶ್ವಾಸ ಇಡುತ್ತಾರೆ ಎಂದು ಕಿವಿಮಾತು ಹೇಳಿದರು.
ಹೆಚ್ಚು ಅಂತರದ ಗೆಲುವಿನ ಸವಾಲು
3 ರಾಜ್ಯಗಳ ಚುನಾವಣೆಯ ಫಲಿತಾಂಶ ದೇಶದ ರಾಜಕಾರಣದ ದಿಕ್ಸೂಚಿಯಾಗಿದೆ. ರಾಜ್ಯದಲ್ಲಿ ಹೇಗಿದೆ ಎಂದರೆ ಅದು ಯತೀಶ್ ದೇವ ಅವರ ಗೆಲುವು. ಅಂದರೆ ರಾಜ್ಯ, ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬೇಕೆಂಬುದೇ ಜನರ ಆಶಯ ಎಂದ ಅವರು, ರಾಂ ಭಟ್ ಅವರ ಕಾಲದಲ್ಲಿ ಒಂದೊಂದು ಜಯವನ್ನು ಸಂಭ್ರಮಿಸುವ ಸಂದರ್ಭವಿತ್ತು. ಆದರೆ ಇಂದು ಗೆಲುವಿನ ಅಂತರವನ್ನು ನೋಡಿ ಸಂಭ್ರಮಿಸುತ್ತಿದ್ದೇವೆ. ಗೆಲುವಿನ ಅಂತರ ಹೆಚ್ಚಾದಷ್ಟು ಜನರ ವಿಶ್ವಾಸ ಹೆಚ್ಚಾಗುತ್ತಿದೆ ಎಂದರ್ಥ. ಆದ್ದರಿಂದ ಹೆಚ್ಚು ಅಂತರದಿಂದ ಗೆಲುವು ಪಡೆಯುವುದನ್ನು ನಾವು ಸವಾಲಾಗಿ ತೆಗೆದುಕೊಳ್ಳಬೇಕು ಎಂದರು.
ಹಿಂದುತ್ವದ ಆಧಾರದಲ್ಲಿ ಸಂಘಟನೆ
ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎಂದು ನಂಬಿರುವ ಪಕ್ಷ ಬಿಜೆಪಿ. ಆದ್ದರಿಂದ ಪ್ರತಿಯೋರ್ವ ಕಾರ್ಯಕರ್ತರೂ, ಮುಖಂಡರು ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ. ಹಿಂದುತ್ವದ ಆಧಾರದಲ್ಲಿ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಓರ್ವ ಸಾಮಾನ್ಯ ಕಾರ್ಯಕರ್ತನೂ ನಾಯಕನಾಗಲು ಬಿಜೆಪಿಯಲ್ಲಿ ಸಾಧ್ಯ. ಸುಳ್ಯದ ದೇವಚಲ್ಲದಿಂದ ಬಂದ ಯತೀಶ್ ದೇವ ಅವರ ಮೇಲೆ ವಿಶ್ವಾಸವಿಟ್ಟು, ಬಿಜೆಪಿಯ ಮೇಲೆ ವಿಶ್ವಾಸವಿಟ್ಟು ಈ ವಾರ್ಡಿನ ಜನರು ಯತೀಶ್ ದೇವ ಅವರನ್ನು ಗೆಲ್ಲಿಸಿದ್ದಾರೆ. ಯತೀಶ್ ದೇವ ಅವರಿಗೆ ನೀಡಿರುವ ಜವಾಬ್ದಾರಿಯಲ್ಲಿ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಬಿಜೆಪಿಯೇ ಅಧಿಕಾರಕ್ಕೆ: ಬೂಡಿಯಾರ್
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಪುತ್ತೂರಿಗೆ ಸೌಮ್ಯ ಸ್ವಭಾವದ ಸಂಜೀವ ಮಠಂದೂರು ಅವರು ಶಾಸಕರಾಗಿ ಸಿಕ್ಕಿದ್ದಾರೆ. ಪ್ರತಿಯೋರ್ವ ಕಾರ್ಯಕರ್ತನೂ ಅವರನ್ನು ನೇರವಾಗಿ ಮಾತನಾಡಿ, ತಮ್ಮ ಅಹವಾಲನ್ನು ನೀಡಬಹುದು. ಇದಕ್ಕೆ ಪೂರಕವಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಶಾಸಕರು ಮಾಡಿದ್ದಾರೆ. ಇದರ ಫಲಿತಾಂಶವನ್ನು ನಾವು ಆರ್ಯಾಪು ಗ್ರಾಮ ಪಂಚಾಯತಿನ ಉಪಚುನಾವಣೆಯಲ್ಲಿ ಕಂಡಿದ್ದೇವೆ. ಸುಳ್ಯದ ದೇವಚಲ್ಲದಿಂದ ಬಂದಿರುವ ಯತೀಶ್ ದೇವ ಅವರನ್ನು ಬಹುಮತಗಳಿಂದ ಜನರು ಗೆಲ್ಲಿಸಿಕೊಟ್ಟಿದ್ದಾರೆ ಎಂದರೆ, ಅವರು ಬಿಜೆಪಿ ಮೇಲೆ, ಶಾಸಕರ ಮೇಲೆ, ಯತೀಶ್ ದೇವ ಅವರ ಮೇಲೆ ಇಟ್ಟಿರುವ ವಿಶ್ವಾಸವನ್ನು ನಾವು ಕಾಣಬಹುದು. ಆದ್ದರಿಂದ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಪ್ರತಿಯೋರ್ವ ಕಾರ್ಯಕರ್ತನೂ ತಾನೇ ಅಭ್ಯರ್ಥಿ ಎಂಬಂತೆ ಕೆಲಸ ಮಾಡಬೇಕು. ಖಂಡಿತವಾಗಲೂ ಪುತ್ತೂರಿನಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸಿಗೆ ಬೇಸ್ ಇಲ್ಲ
ಕಾಂಗ್ರೆಸ್ ಪಕ್ಷಕ್ಕೆ ಆರ್ಯಾಪು ಗ್ರಾಮದ 4ನೇ ವಾರ್ಡಿನಲ್ಲಿ ಬೇಸ್ ಇಲ್ಲ ಎನ್ನುವುದು ಈಗಾಗಲೇ ರುಜುವಾತಾಗಿದೆ. ಈ ಉಪಚುನಾವಣೆ ಕಾಂಗ್ರೆಸಿಗೆ ಅಳಿವು – ಉಳಿವಿನ ಪ್ರಶ್ನೆಯಾಗಿತ್ತು. ಹಾಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಪ್ರಯೋಗಿಸಿಯೂ, ಸೋತಿದ್ದಾರೆ. ಆದ್ದರಿಂದ ಈ ವಾರ್ಡಿನ ಜೋಡೆತ್ತುಗಳಾದ ಹರೀಶ್ ನಾಯಕ್ ಹಾಗೂ ಯತೀಶ್ ದೇವ ಅವರು ಜನರ ವಿಶ್ವಾಸ ಗಳಿಸಿರುವುದನ್ನು ಮತ ಕೇಳಲು ಹೋದ ಸಂದರ್ಭದಲ್ಲಿ ಗಮನಿಸಿದ್ದೇನೆ. ಪ್ರತಿಯೊಬ್ಬರಲ್ಲೂ ಆತ್ಮೀಯವಾಗಿ ಬೆರೆಯುವ ಇವರಿಬ್ಬರು, ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಾರೆ. ಇದಕ್ಕೆ ಪ್ರತಿಯೋರ್ವರೂ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಶಾಸಕರ ಅಭಿವೃದ್ದಿ ಕಾರ್ಯ, ಪಂಚಾಯತ್ ಕಾರ್ಯವೈಖರಿ ಗೆಲುವಿಗೆ ಕಾರಣ: ದೇವ
ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಯತೀಶ್ ದೇವ ಮಾತನಾಡಿ, ಗಿರೀಶ್ ಗೌಡ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಸಾಮಾಜಿಕ ಕೆಲಸಗಳಲ್ಲಿ ಸಕ್ರೀಯವಾಗಿದ್ದ ಗಿರೀಶ್ ಗೌಡ ಅವರಿಗೆ ತನ್ನ ಗೆಲುವನ್ನು ಸಮರ್ಪಿಸುತ್ತಿದ್ದೇವೆ ಎಂದ ಅವರು, ಶಾಸಕ ಸಂಜೀವ ಮಠಂದೂರು ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಪಂಚಾಯತ್ ಅನುದಾನಗಳ ಸಮರ್ಪಕ ಸದ್ಭಳಕೆ ತನ್ನ ಗೆಲುವಿಗೆ ಕಾರಣವಾಗಿದೆ. ಶಾಸಕರಾದ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಂಡಲ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ತಾಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ, ಗ್ರಾಪಂ ಮಾಜಿ ಸದಸ್ಯ ಗಣೇಶ್ ರೈ ಮೂಲೆ, ಶಕ್ತಿ ಕೇಂದ್ರದ ಅಧ್ಯಕ್ಷ ಜಯಂತ ಕಂಬಳತಡ್ಡ, ಜಿಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು. ಮೀನಾಕ್ಷಿ ಮಂಜುನಾಥ್, ರವಿಕಿರಣ್ ಮಯ್ಯ, ಮಹೇಶ್ ಮರಿಕೆ, ಪುರುಷೋತ್ತಮ ಶೇಡಿಗುಂಡಿ, ಬೂತ್ ಅಧ್ಯಕ್ಷ ಅಜಿತ್ ರೈ ತೊಟ್ಲ, ಕಾರ್ಯದರ್ಶಿ ಶಶಿಧರ ಮರಿಕೆ, ರಾಕೇಶ್ ಗೌಡ ಪಾಪೆತ್ತಡ್ಕ ಮೊದಲಾದವರ ಪರಿಶ್ರಮದಿಂದ ತನ್ನ ಗೆಲುವು ಸಾಧ್ಯವಾಯಿತು ಎಂದ ಅವರು, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭ ಉಪಚುನಾವಣೆಯಲ್ಲಿ ಜಯ ಗಳಿಸಿದ ಯತೀಶ್ ದೇವ ಅವರನ್ನು ಗೌರವಿಸಲಾಯಿತು.
ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಚನಿಲ ತಿಮ್ಮಪ್ಪ ಶೆಟ್ಟಿ, ಕ್ಷೇತ್ರ ಪ್ರಭಾರಿ ರಾಜೇಶ್ ಕಾವೇರಿ, ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ, ಎಸ್ಟಿ ಮೋರ್ಚಾದ ಜಿಲ್ಲಾ ಅಧ್ಯಕ್ಷ ಹರೀಶ್ ಬಿಜತ್ರೆ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ನಾಯಕ್ ಬಳಕ್ಕ, ಗ್ರಾಪಂ ಮಾಜಿ ಸದಸ್ಯ ಹಾಗೂ ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಗಣೇಶ್ ರೈ, ಪ್ರಗತಿ ಪರ ಕೃಷಿಕ ಸದಾಶಿವ ಭಟ್ ಮರಿಕೆ, ಬೂತ್ ಅಧ್ಯಕ್ಷ ಅಜಿತ್ ರೈ ತೊಟ್ಲ, ಪ್ರಮುಖರಾದ ಸೀತಾರಾಮ ರೈ ಕೈಕಾರ, ದಾಮೋದರ ರೈ ತೊಟ್ಲ ಮೊದಲಾದವರು ಉಪಸ್ಥಿತರಿದ್ದರು. ಜಯಂತ ಶೆಟ್ಟಿ ಕಂಬಳತ್ತಡ್ಡ ಕಾರ್ಯಕ್ರಮ ನಿರೂಪಿಸಿದರು.