ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ ಹಾಗೂ ಅವರು ನೀಡಿರುವ ಅನುದಾನವನ್ನು ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಬಳಕೆ ಮಾಡಿರುವುದೇ ತನ್ನ ಗೆಲುವಿಗೆ ಕಾರಣ ಎಂದು ಆರ್ಯಾಪು ಗ್ರಾ.ಪಂ. ಉಪಚುನಾವಣೆಯಲ್ಲಿ ಗೆಲುವು ಪಡೆದುಕೊಂಡ ಯತೀಶ್ ದೇವ ತಿಳಿಸಿದ್ದಾರೆ.
ಗಿರೀಶ್ ಗೌಡ ಅವರ ಅಕಾಲಿಕ ನಿಧನದ ಬಳಿಕ ಉಪಚುನಾವಣೆ ನಡೆದಿದ್ದು, ತನ್ನ ಗೆಲುವನ್ನು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಗಿರೀಶ್ ಗೌಡ ಅವರಿಗೆ ಅರ್ಪಿಸುತ್ತೇನೆ ಎಂದಿರುವ ಯತೀಶ್ ದೇವ. ಶಾಸಕ ಸಂಜೀವ ಮಠಂದೂರು ಅವರು ಆರ್ಯಾಪು ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಿದ ಅನುದಾನ, ಶ್ರಮ ತನ್ನ ಗೆಲುವಿಗೆ ಕಾರಣವಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ತನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ. ಅವರ ಬೆವರಿನ ಫಲವೇ ತನ್ನ ಗೆಲುವು. ನನ್ನ ಗೆಲುವಿನಲ್ಲಿ ವಾರ್ಡಿನ ಎಲ್ಲಾ ಮತದಾರರದ್ದು ಪಾಲು ಇದ್ದು, ಅವರಿಗೆ ವಿಶೇಷವಾಗಿ ದನ್ಯವಾದ ತಿಳಿಸಲು ಬಯಸುತ್ತೇನೆ. ಕಾರ್ಯಕರ್ತರ ನಿಸ್ವಾರ್ಥ ಕೆಲಸಗಳನ್ನು ಹತ್ತಿರದಿಂದ ತಿಳಿಯುವಂತಾಗಿದ್ದು, ಮುಂದೆ ಪಕ್ಷದ ಹಾಗೂ ಜನಸಾಮಾನ್ಯರ ಹಿತದೃಷ್ಟಿಯಿಂದ ಕೆಲಸ ಭರವಸೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಜನಪ್ರಿಯ ಯೋಜನೆಗಳಾದ ನರೇಗಾ ಯೋಜನೆ, ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಸಿಸಿ ರಸ್ತೆ ನಿರ್ಮಾಣ, ಬೀದಿ ದೀಪದ ವ್ಯವಸ್ಥೆ ಸೇರಿದಂತೆ ಇನ್ನಿತರ ಜನಪ್ರಿಯ ಯೋಜನೆಗಳು ಸಾಮಾನ್ಯ ನಾಗರಿಕರಿಗೂ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಭ್ರಷ್ಟಾಚಾರ ನಿರ್ಮೂಲನೆಗೂ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.