ಪುತ್ತೂರು : ಸಂಪ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ವಿವಿಧ ಸಂಘ ಸಂಸ್ಥೆಯ ಆಶ್ರಯದಲ್ಲಿ ನಡೆಯುವ ಉಚಿತ ವೈದ್ಯಕೀಯ ಶಿಬಿರಕ್ಕೆ ವರ್ಷ ಸಂಭ್ರಮ. ಈ ಹಿನ್ನಲೆಯಲ್ಲಿ ಆರೋಗ್ಯ ಮೇಳವನ್ನು ಮಾ.5 ಭಾನುವಾರ ವಿಶಿಷ್ಟ ಶೈಲಿಯಲ್ಲಿ ನಡೆಯಲಿದೆ.
ದೇವಸ್ಥಾನದ ಆರೋಗ್ಯ ರಕ್ಷಾ ಸಮಿತಿ, ಸಂಪ್ಯ ನವಚೇತನಾ ಯುವಕ ಮಂಢಲ ಹಾಗೂ ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸಹಕಾರದೊಂದಿಗೆ ವೈದ್ಯಕೀಯ ಶಿಬಿರ ನಡೆಯಲಿದ್ದು, 12 ಪ್ರತ್ಯೇಕ ವಿಭಾಗಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ. ಸಾಮಾನ್ಯ ವೈದ್ಯಕೀಯ ತಪಾಸಣೆ, ಮಕ್ಕಳ ಚಿಕಿತ್ಸೆ ಸ್ತ್ರೀರೋಗ ಚಿಕಿತ್ಸೆ, ಕಿವಿ, ಗಂಟಲು, ಮೂಗು, ಕಣ್ಣಿನ ಚಿಕಿತ್ಸೆ, ದಂತ ಚಿಕಿತ್ಸೆ, ಆಯುರ್ವೇದ ಚಿಕಿತ್ಸೆ, ಹೋಮಿಯೋಪತಿ, ನರರೋಗ ಹಾಗೂ ಮೂತ್ರಜನಕಾಂಗಕ್ಕೆ ಸಂಬಂಧಿಸಿದ ರೋಗಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಅಲ್ಲದೆ ಮಧುಮೇಹ ರಕ್ತ ಪರೀಕ್ಷೆ, ಎಲುಬು ಸಾಂಧ್ರತೆ ಪರೀಕ್ಷೆ ಹಾಗೂ ರೋಗಿಗಳ ಅವಧ್ಯಕತೆಗನುಗುಣವಾಗಿ ಒಂದು ವಾರಗಳ ವಧಿಯ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು. ಒಟ್ಟಾರೆಯಾಗಿ ಒಂದೂ ಸೂರಿನಡಿ ಎಲ್ಲಾ ಸೇವೆಗಳು ಉಚಿತವಾಗಿ ಲಭ್ಯವಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯರ ಪರಿಕಲ್ಪನೆಯಲ್ಲಿ ಈ ಯೋಜನೆ ಏ.3, 2022 ರಲ್ಲಿ ಆರಂಭಗೊಂಡಿತು. ಅಂದಿನಿಂದ ಪ್ರತಿ ತಿಂಗಳ ಪ್ರಥಮ ಭಾನುವಾರ ಶಿಬಿರಗಳನ್ನು ನಡೆಸಿ ಯಶಸ್ವಿಯಾಗಿ ನಡೆಯತ್ತಾ ಬಂದಿದೆ. ತಿಂಗಳ ಪ್ರಥಮ ಭಾನುವಾರ ನಡೆಸುವ ಶಿಬಿರದಲ್ಲಿ ಪುತ್ತೂರು, ಸುಳ್ಯ ಹಾಗೂ ಮಂಗಳೂರಿನ ನುರಿತ ವೈದ್ಯರುಗಳ ತಂಡ ಪಾಲ್ಗೊಂಡು ತಪಾಸಣೆ ನಡೆಸುತ್ತಿದೆ.
ಮಾ.5 ರಂದು ಶಿಬಿರದ ಉದ್ಘಾಟನೆ ಬಳಿಕ ವಿವಿಧ ವಿಭಾಗಗಳಲ್ಲಿ ವೈದ್ಯಕೀಯ ತಪಾಸಣೆ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದಮ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಡಾ.ಅಶೋಕ್ ಪಡಿವಾಳ್ ಶಿಬಿರ ಉದ್ಘಾಟಿಸುವರು. ಡಾ.ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸುವರು. ಶಾಸಕ ಸಂಜೀವ ಮಠಂದೂರು, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಹಿರಿಯ ವೈದ್ಯ ಗೋಪಿನಾಥ ಪೈ ಪಾಲ್ಗೊಳ್ಳಲಿದ್ದಾರೆ. ಬಳಿಕ ನರ ಮಾನಸಿಕ ತಜ್ಞ ಡಾ.ಗಣೇಶ್ ಮುದ್ರಜೆಯವರು ಮಾನಸಿಕ ಆರೋಗ್ಯದ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ ನಡೆಯುವ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಉದ್ಯಮಿಗಳಾದ ಪ್ರಭಾಕರ ಶೆಟ್ಟಿ, ನರಸಿಂಹ ಕಾಮತ್, ವಿದ್ಯಾಮಾತಾ ಅಕಾಡೆಮಿ ನಿರ್ದೇಶಕ ಭಾಗ್ಯೇಶ್, ಪ್ರಗತಿಪರ ಕೃಷಿಕ ಸುಂದರ ಪೂಜಾರಿ ಬಡಾವು, ಕಲ್ಲಮ ಶ್ರೀ ಗುರುರಾಘವೇಂದ್ರ ಮಠದ ಆಡಳಿತ ವ್ಯವಸ್ಥಾಪಕ ಡಾ.ಸೀತಾರಾಮ ಭಟ್ ಪಾಲ್ಗೊಳ್ಳಳಿದ್ದಾರೆ. ವೈದ್ಯಕೀಯ ಶಿಬಿರದಲ್ಲಿ ಸಹಕರಿಸಿ ವೈದ್ಯರಿಗೆ, ವಿಶೇಷ ದೇಣಿಗೆ ನೀಡಿದವರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.