ಪುತ್ತೂರು : ಬಡಗನ್ನೂರು ಗ್ರಾಮದ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ೬ನೇ ದಿನವಾದ ಗುರುವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಶ್ರೀ ದೇವರ ಪ್ರತಿಷ್ಠೆ ನಡೆಯಿತು.
ಬೆಳಗ್ಗೆ ೮ ಗಂಟೆಗೆ ಕ್ಷೇತ್ರದ ತಂತ್ರಿಗಳಾದ ಬ್ರ.ವೇ.ಮೂ. ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ವೇ.ಮೂ.ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ೧೦೮ ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾ ಪಾಣಿ ನಡೆದು ಮಧ್ಯಾಹ್ನ 1.04 ರಿಂದ 3.15 ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ವಿಷ್ಣುಮೂರ್ತಿ ಹಾಗೂ ಪರಿವಾರ ದೇವರುಗಳ ಪ್ರತಿಷ್ಠೆ ನಡೆಯಿತು. ಬಳಿಕ ಪ್ರತಿಷ್ಠಾ ಬಲಿ, ಅಂಕುರ ಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ ಜರಗಿತು.
ಸಂಜೆ ೬ ಗಂಟೆಗೆ ನಿತ್ಯ ನೈಮಿತ್ಯಗಳ ನಿರ್ಣಯ, ಭದ್ರದೀಪವಿಟ್ಟು ಕವಾಟ ಬಂಧನ, ಅಂಕುರ ಪೂಜೆ, ಸೋಪಾನ ಪೂಜೆ ಬಳಿಕ ಅನ್ನಸಂತರ್ಪಣೆ ಜರಗಿತು.
ಬೆಳಗ್ಗೆ ೮.೩೦ ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ, 10.30 ಕ್ಕೆ ಬೆಂಗಳೂರು ಆರ್ಟ್ ಆಫ್ ಲಿವಿಂಗ್ನ ಪೂಜ್ಯ ಸೂರ್ಯಪಾದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸತ್ಸಂಗ, ಗಾನ-ಧ್ಯಾನ-ಜ್ಞಾನ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ೭ಕ್ಕೆ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಯಕ್ಷಗಾನ ಬಯಲಾಟ ಕಲ್ಯಾಣತ್ರಯ, ಲಕ್ಷ್ಮೀ-ಕನಕಾಂಗಿ-ರತಿ ಪ್ರದರ್ಶನಗೊಂಡಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಪವಿತ್ರಪಾಣಿ ಕೇಶವ ಭಟ್ ಕೂವೆತ್ತೋಟ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಲರಾಜ್ ಶೆಟ್ಟಿ ನಿಟ್ಟೆಗುತ್ತು ಪೇರಾಲು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿಷ್ಣು ಭಟ್ ಪಡ್ಪು, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಾರಾಯಣ ನಾಯ್ಕ, ಆರ್ಥಿಕ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಪಟ್ಟೆ, ಕಾರ್ಯಾಲಯ ಮುಖ್ಯಸ್ಥ ರಾಮಣ್ಣ ಗೌಡ ಕೆ. ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು, ಸಂಚಾಲಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.