ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್‍ ಟಿಕೇಟ್ ನೀಡಿ

ಪುತ್ತೂರು, ಸುಳ್ಯ, ಬೆಳ್ತಂಗಡಿ ಒಕ್ಕಲಿಗ ಗೌಡ ಸಮುದಾಯದ ಕಾಂಗ್ರೆಸ್ ಮುಖಂಡರಿಂದ ಡಿಕೆಶಿಗೆ ಮನವಿ

ಪುತ್ತೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಕ್ಕಲಿಗ ಗೌಡ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಒಕ್ಕಲಿಗ ಗೌಡ ಸಮಾಜದ ಕಾಂಗ್ರೆಸ್ ಮುಖಂಡರ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಇದೇ ಸಂದರ್ಭ ದ.ಕ. ಜಿಲ್ಲೆಯಲ್ಲಿ ಒಕ್ಕಲಿಗ ಗೌಡ ಸಮುದಾಯವನ್ನು ಕಡೆಗಣಿಸಿರುವುದನ್ನು ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರಲಾಯಿತು.

ನಿಯೋಗದ ವತಿಯಿಂದ ಡಿ.ಕೆ. ಶಿವಕುಮಾರ್ ಅವರನ್ನು ಸನ್ಮಾನಿಸಿ, ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಕೂಜುಗೋಡು ವೆಂಕಟ್ರಮಣ ಗೌಡ, ಕುರುಂಜಿ ವೆಂಕಟ್ರಮಣ ಗೌಡ ಅವರಿಗೆ ಕಾಂಗ್ರೆಸಿನಿಂದ ಅವಕಾಶ ನೀಡಿದ್ದು, ಸತತ ಮೂರು ಬಾರಿಯೂ ಕಾಂಗ್ರೆಸ್ ಜಯ ಗಳಿಸಿತ್ತು. ಅದಾದ ಬಳಿಕ ಒಕ್ಕಲಿಗ ಗೌಡ ಸಮುದಾಯಕ್ಕೆ ಅವಕಾಶ ನೀಡಿಲ್ಲ. ಪರಿಣಾಮ ಕಾಂಗ್ರೆಸ್ ಹಿನ್ನಡೆ ಅನುಭವಿಸುವಂತಾಯಿತು. ಇದಕ್ಕೆಲ್ಲಾ ಕಾರಣ, ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕರು. ಕಳೆದ 50 ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ ಒಕ್ಕಲಿಗ ಗೌಡ ಸಮುದಾಯವನ್ನು ಕಡೆಗಣಿಸಿಕೊಂಡು ಬರಲಾಗಿದೆ. ಒಕ್ಕಲಿಗ ಗೌಡ ಸಮುದಾಯಕ್ಕೆ ಪುತ್ತೂರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನೂ ನೀಡಿಲ್ಲ ಎಂಬ ವಿಷಯವನ್ನು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದರು.

ಡಿ.ವಿ. ಸದಾನಂದ ಗೌಡ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಾಗ, ಬಿಜೆಪಿಗೆ ಹೋದ ಮತದಾರರನ್ನು ಪುನಃ ಮರಳಿ ಕಾಂಗ್ರೆಸಿಗೆ ಕರೆತರುವ ಪ್ರಯತ್ನ ಇದುವರೆಗೆ ನಡೆದಿಲ್ಲ. ಆದ್ದರಿಂದ ಪುತ್ತೂರಿನಲ್ಲಿ ಮತ್ತೆ ಒಕ್ಕಲಿಗ ಗೌಡ ಸಮುದಾಯಕ್ಕೆ ಕಾಂಗ್ರೆಸ್ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಲಾಯಿತು.































 
 

ನಿಯೋಗದಲ್ಲಿ ದ.ಕ. ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ್, ನ್ಯಾಯವಾದಿ ವೆಂಕಪ್ಪ ಗೌಡ, ಅಮರ್‌ನಾಥ್ ಗೌಡ ಪುತ್ತೂರು, ಶೈಲಜಾ ಅಮರ್‌ನಾಥ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಗೀತಾ ಕೊಲ್ಚಾರ್, ಬಾಲಕೃಷ್ಣ ಗೌಡ ಕೆಮ್ಮಾರ, ಧೀರಜ್ ಕಕೊಡಿಪ್ಪಾಡಿ ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top