ಶಾಸಕ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಾರ್ಯವೈಖರಿಯಿಂದ ಮತ್ತೊಮ್ಮೆ ಬಿಜೆಪಿ ಗೆಲುವು | ಬೂತ್ ವಿಜಯ ಅಭಿಯಾನದಿಂದ ಬಿಜೆಪಿ ಬೂತ್ ಶಕ್ತೀಕರಣ

ಪುತ್ತೂರು: ಮುಂದಿನ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆ ಲೀಡ್‌ಗಿಂತಲೂ ಅಧಿಕ ಮತಗಳಿಂದ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಜೆಪಿ ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ ತಿಳಿಸಿದ್ದಾರೆ.

ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಬಿಜೆಪಿ ಅತ್ಯಂತ ಬಲಿಷ್ಠವಾಗಿದ್ದು, ಯೋಜನೆ ಹಾಗೂ ಯೋಚನೆ ಸಹಿತ ಕಾರ್ಯಬದ್ಧತೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ಪಕ್ಷದ ಯೋಜನೆ, ಯೋಚನೆಗಳಿಗೆ ಪೂರಕವಾಗಿ ಶಾಸಕ ಸಂಜೀವ ಮಠಂದೂರು ಅವರ ಕಾರ್ಯವೈಖರಿ ಯಶಸ್ವಿಯಾಗಿದೆ. ಈ ಹಿನ್ನಲೆಯಲ್ಲಿ ನಮಗೆ ಗೆಲ್ಲುವುದರಲ್ಲಿ ನಿಶ್ಚಯವಿದೆ ಎಂದ ಅವರು, ಅಡಿಕೆಗೆ ಸಂಬಂಧಿಸಿದ ತೆರಿಗೆ ಏರಿಕೆ, ಕೃಷಿ ಸಮ್ಮಾನ್ ಯೋಜನೆ, ಅಕ್ರಮ ಸಕ್ರಮದಲ್ಲೂ ದಾಖಲೆ ರೀತಿಯ ಕೆಲಸ ಕಾರ್ಯಗಳು ನಡೆದಿವೆ. ಈ ಎಲ್ಲಾ ಯೋಜನೆಗಳನ್ನು ಮತದಾರರಿಗೆ ತಿಳಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ತಲುಪಿಸುವ ಕಾರ್ಯವನ್ನು ನಮ್ಮ ಸಂಸದರು, ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮಾಡಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಬೂತ್ ಅಧ್ಯಕ್ಷರ ಮನೆಗಳಿಗೆ ಭೇಟಿ ಮಾಡಿದ್ದಾರೆ. ಇವೆಲ್ಲದರ ಪರಿಣಾಮ 220 ಮತಗಟ್ಟೆಗಳಿಂದ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ 25 ಸಾವಿರ ಮಂದಿ ಪಾಲ್ಗೊಂಡಿರುವುದು, ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ 20 ಸಾವಿರ ಮಂದಿ ಪುತ್ತೂರಿನಿಂದ ಭಾಗವಹಿಸಿರುವುದು ಪುತ್ತೂರಿನಲ್ಲಿ ಬಿಜೆಪಿ ವತಿಯಿಂದ ನಡೆದ ಕಾರ್ಯವೈಖರಿಯೇ ಕಾರಣವಾಗಿದೆ ಎಂದರು.

ಕಳೆದ ಡಿಸೆಂಬರ್‌ನಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಎಲ್ಲಾ ಬೂತ್‌ಗಳನ್ನು ಶಕ್ತಿಕರಣ ಮಾಡಲಾಗಿದೆ. ಪೇಜ್ ಪ್ರಮುಖರನ್ನು ನಿಯುಕ್ತಿಗೊಳಿಸಿ ವಾಟ್ಸಪ್ ಗ್ರೂಪ್ ರಚನೆ, ಮನ್ ಕೀ ಬಾತ್, ಮನೆ ಮನೆಗಳಲ್ಲಿ ಬಾವುಟ ಹಾರಿಸುವ, ಬೂತ್‌ನ ಎಲ್ಲಾ ಮನೆಗಳ ಸಂಪರ್ಕ, ಪ್ರತೀ ಮನೆಗಳಿಗೂ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ತಲುಪಿಸುವುದು, ಪ್ರಾಥಮಿಕ ಸದಸ್ಯತ್ವ ಅಭಿಯಾನ, ಫಲಾನುಭವಿಗಳನ್ನು ಸಂಪರ್ಕಿಸುವುದು ಮುಂತಾದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಸಿವೆ ಎಂದರು.































 
 

ಮಾ. 11ಕ್ಕೆ ಪುತ್ತೂರಿಗೆ ವಿಜಯ ಸಂಕಲ್ಪ ಯಾತ್ರೆ:

ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ 3ನೇ ಅಭಿಯಾನದ ಅಂಗವಾಗಿ ಐದು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೋರ್ಚಾಗಳ ಸಮಾವೇಶ, ವಿಜಯ ಸಂಕಲ್ಪ ಯಾತ್ರೆ, ಫಲಾನುಭವಿಗಳ ಸಮಾವೇಶ, ಪ್ರಗತಿ ರಥ ವಾಹನ, ಪ್ರಣಾಳಿಕೆಗೆ ಸಲಹೆ ಅಭಿಯಾನ ನಡೆಯಲಿದೆ.

ಇದರಲ್ಲಿ ವಿಜಯ ಸಂಕಲ್ಪ ಯಾತ್ರೆ 4 ಭಾಗವಾಗಿ ನಡೆಯಲಿದೆ. ರಾಜ್ಯದಿಂದ ಹೊರ ವಿಜಯ ಸಂಕಲ್ಪ ಯಾತ್ರೆ ಮಾ. 11ಕ್ಕೆ ಮಧ್ಯಾಹ್ನ ಸುಳ್ಯಕ್ಕೆ ಬರಲಿದೆ. ಅಲ್ಲಿಂದ ಪುತ್ತೂರಿಗೆ ಬಂದು ಸಾರ್ವಜನಿಕ ಸಭೆ ನಡೆಯಲಿದೆ. ಸಮಾರೋಪ ಸಮಾರಂಭ ಮಾ. 24ರಂದು ದಾವಣಗೆರೆಯಲ್ಲಿ ನಡೆಯಲಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಾ. 5ರಂದು ಬಿಜೆಪಿ ಎಸ್ಟಿ ಮೋರ್ಚಾ ಸಮಾವೇಶ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಬಳಿಕ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶ ನಡೆಯಲಿದೆ. ಯುವ ಮೋರ್ಚಾ ವತಿಯಿಂದ ಪ್ರಗತಿ ರಥ ವಾಹನ ನಡೆಯಲಿದೆ. ಎಲ್‌ಇಡಿ ವಾಹನಗಳ ಮೂಲಕ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ವಾಹನದಲ್ಲಿ ಬಿತ್ತಿರಿಸಲಾಗುವುದು. ಪ್ರಣಾಳಿಕೆ ಸಲಹಾ ಅಭಿಯಾನದಲ್ಲಿ ಸಾರ್ವಜನಿಕರ ಸಲಹೆ ಪಡೆಯುವ ಕಾರ್ಯಕ್ರಮ ನಡೆಯಲಿದೆ ಎಂದು ಹೇರಳೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top