ಬೆಂಗಳೂರು: ಪಿಯು ವಾರ್ಷಿಕ ಪರೀಕ್ಷೆಗೆ ಹಿಜಾಬ್ ಧರಿಸುವಂತಿಲ್ಲ. ಪ್ರತಿಯೋರ್ವ ವಿದ್ಯಾರ್ಥಿಯು ಶಾಲಾ ಸಮವಸ್ತ್ರ ಧರಿಸಿಯೇ ಪರೀಕ್ಷೆಗೆ ಹಾಜರಾಗುವಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಮಾರ್ಚ್ 9ರಿಂದ ಪಿಯು ಪರೀಕ್ಷೆಗಳು ರಾಜ್ಯಾದ್ಯಂತ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಉಡುಪಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪದವಿಪೂರ್ವ ಕಾಲೇಜುಗಳ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಹಿಜಾಬ್ ವಿಷಯವು ಸುಪ್ರೀಂ ಕೋರ್ಟಿನಲ್ಲಿದೆ. ಆದ್ದರಿಂದ ಪರೀಕ್ಷಾ ಸಮಯದಲ್ಲಿ ಹಿಜಾಬ್ ಧರಿಸಲು ಅನುಮತಿಸುವ ಪ್ರಶ್ನೆಯೇ ಇಲ್ಲ. ಎಲ್ಲಾ ವಿದ್ಯಾರ್ಥಿಗಳು ಪೂರ್ವ ನಿಗದಿಯಂತೆ ನಿಗದಿತ ಸಮವಸ್ತ್ರ ಧರಿಸಿಯೇ ಪರೀಕ್ಷೆಗೆ ಹಾಜರಾಗಬೇಕು. ವಿದ್ಯಾರ್ಥಿಗಳು ಎಲ್ಲಾ ಚಿಂತೆ ಬಿಟ್ಟು ಸರಿಯಾಗಿ ಓದಿ, ಹೆಚ್ಚಿನ ಅಂಕ ಗಳಿಸಲು ಸೂಚಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.