ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್‌ನ 28ನೇ ವರ್ಷದ ಸಂಸ್ಥಾಪನಾ ದಿನಾಚರಣೆ ದ.ಕ.ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಎಲ್ಲಾ ಕ್ಷೇತ್ರಗಳ, ವಲಯಗಳ ಸಹಕಾರದೊಂದಿಗೆ ಮಾ. 7ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಕೆ.ಎಸ್.ಟಿ.ಎ. ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ್ ಉರ್ಲಾಂಡಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ಬಜೆಟ್ ಮಂಡನೆ ಮೊದಲು ನಮ್ಮ ಮೂರು ಬೇಡಿಕೆಯಾದ ಪೆನ್ಶನ್, ಟೈಲರ್ ವೃತ್ತಿಯಲ್ಲಿರುವವರ ಮಕ್ಕಳಿಗೆ ಸ್ಕಾಲರ್ ಶಿಪ್ ಹಾಗೂ ಆರೋಗ್ಯ ವಿಮೆ ನೀಡುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಬೇಡಿಕೆ ಈಡೇರಿಲ್ಲ. ಬಜೆಟ್‌ನಲ್ಲಿ ಈ ಕುರಿತು ಪ್ರಸ್ತಾಪವಾಗಿಲ್ಲ ಎಂದು ತಿಳಿಸಿದರು.
ಮಾ. 7ರಂದು ನಡೆಯುವ ಕಾರ್ಯಕ್ರಮದಲ್ಲಿ ಅಶಕ್ತ ವೃತ್ತಿ ಬಾಂಧವರಿಗೆ ಸಹಾಯಧನ, ಹಿರಿಯ ವೃತ್ತಿ ಬಾಂಧವರಿಗೆ ಸನ್ಮಾನ, ಸಹಾಯಧನ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ ಉರ್ಲಾಂಡಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಅಪರಾಧಿ ಮತ್ತು ಸಂಚಾರದ ಉಪ ಆಯುಕ್ತ ಡಿ.ಪಿ. ದಿನೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಎಸ್‌ಟಿಎ ರಾಜ್ಯ ಸಮಿತಿ ಅಧ್ಯಕ್ಷ ನಾರಾಯಣ ಬಿ.ಎ., ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಕೋಶಾಧಿಕಾರಿ ರಾಮಚಂದ್ರ ಉಡುಪಿ, ಇಂಧನ ಮತ್ತು ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂದರು ಹಾಗೂ ಮೀನುಗಾರಿಕಾ ಸಚಿವ ಎಸ್. ಅಂಗಾರ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ಯು.ಟಿ. ಖಾದರ್ ಮತ್ತಿತರ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿಯ ರಘುನಾಥ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಲಿಗೋಧರ, ನಗರ ಉಪಾಧ್ಯಕ್ಷ ಯಶೋಧರ ಜೈನ್, ಜಿಲ್ಲಾ ಸಮಿತಿಯ ಜಯರಾಮ ಬಿ.ಎಸ್. ಉಪಸ್ಥಿತರಿದ್ದರು.