ಹೊಸದಿಲ್ಲಿ : ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್ 50 ರೂ. ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 350 ರೂ. ಏರಿಕೆ ಮಾಡುವ ಮೂಲಕ ತೈಲ ಕಂಪನಿಗಳು ಜನರಿಗೆ ಶಾಕ್ ನೀಡಿವೆ. ಅದರಲ್ಲೂ ಚುನಾವಣೆ ಎದುರಿಸುತ್ತಿರುವ ಕರ್ನಾಟಕದಲ್ಲಿ ವಿಪಕ್ಷಗಳ ಪಾಲಿಗೆ ಸರಕಾರವನ್ನು ಟೀಕಿಸಲು ಅತ್ಯುತ್ತಮ ಅಸ್ತ್ರ ಸಿಕ್ಕಿದಂತಾಗಿದೆ.
ಬೆಲೆ ಏರಿಕೆ ಇಂದಿನಿಂದಲೇ ಜಾರಿಗೆ ಬರಲಿದೆ. ಹಲವು ತಿಂಗಳುಗಳ ಕಾಲ ಗೃಹಬಳಕೆಯ ಸಿಲಿಂಡರ್ ದರ ಪರಿಷ್ಕರಣೆಯಾಗಿರಲಿಲ್ಲ. ಆದರೆ ಇಂದಿನಿಂದ ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಾಗಿದೆ. ಇದರಿಂದ ಜನಸಾಮಾನ್ಯರ ಹೊರೆ ಮತ್ತಷ್ಟು ಹೆಚ್ಚಾಗಲಿದೆ. ಹೋಟೆಲ್‌ನಲ್ಲಿ ತಿನ್ನುವವರಿಗೂ ಬೆಲೆ ಏರಿಕೆ ಬಿಸಿ ತಟ್ಲಿದೆ.
14.2 ಕೆಜಿ ಗೃಹಬಳಕೆಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್‌ನ ಬೆಲೆ ₹ 50 ಏರಿಕೆಯಾಗಿದೆ. ಈ ಪರಿಷ್ಕರಣೆಯೊಂದಿಗೆ ಗೃಹಬಳಕೆಯ ಸಿಲಿಂಡರ್ ಬೆಲೆ 1103 ರೂ. ಆಗಲಿದೆ.
19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 350.50 ರೂ. ಏರಿಕೆಯಾಗಿದ್ದು, ಈ ಹೆಚ್ಚಳದೊಂದಿಗೆ 2119.50 ರೂ. ಆಗಲಿದೆ. ಕಳೆದ 6 ತಿಂಗಳಿಂದ ಹೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೀಗ ವಾಣಿಜ್ಯ ಬಳಕೆಯ ಸಿಲಿಂಡರ್ ಮಾತ್ರವಲ್ಲ ಗೃಹ ಬಳಕೆಯ ಸಿಲಿಂಡರ್ ದರವೂ ಹೆಚ್ಚಾಗಿದೆ.
ಸ್ಥಳೀಯ ತೆರಿಗೆಗಳಿಂದಾಗಿ ಅಡುಗೆ ಅನಿಲದ ಬೆಲೆ ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಣೆ ಮಾಡುತ್ತಾರೆ.
ಪ್ರತಿ ಕುಟುಂಬ ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಅರ್ಹವಾಗಿದೆ. ಅದಕ್ಕಿಂತ ಹೆಚ್ಚಾದರೆ, ಗ್ರಾಹಕರು ಎಲ್‌ಪಿಜಿ ಸಿಲಿಂಡರ್‌ಗಳ ಯಾವುದೇ ಹೆಚ್ಚುವರಿ ಖರೀದಿಗಳನ್ನು ಮಾರುಕಟ್ಟೆ ಬೆಲೆಗೆ ನೀಡಬೇಕಾಗುತ್ತದೆ.