ಪುತ್ತೂರು: ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ನಾರಾಯಣ ಗುರುಗಳ ಕುರಿತು ವಿಚಾರವನ್ನು ಕಿತ್ತು ಹಾಕಿರುವುದು ದ.ಕ. ಜಿಲ್ಲೆಯ ನಾರಾಯಣ ಗುರುಗಳ ಅನುಯಾಯಿಗಳಿಗೆ ಮಾಡಿದ ಅವಮಾನ ಎಂದು ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಆರೋಪಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿ ರಚಿಸಿ, ಸಮಿತಿಗೆ ತೃತೀಯ ದರ್ಜೆ ಲೇಖಕ ರೋಹಿತ್ ಚಕ್ರತೀರ್ಥರನ್ನು ಅಧ್ಯಕ್ಷರನ್ನಾಗಿ ಮಾಡಿ, ಅವರ ವಿಚಾರಗಳನ್ನೇ ಸಮರ್ಥನೆ ಮಾಡಿ ನಾರಾಯಣ ಗುರುಗಳಿಗೆ ಅವಮಾನ ಮಾಡಿರುವುದು ಇಡೀ ಸಮಾಜಕ್ಕೆ ಮಾಡಿದ ಅವಮಾನ. ಸಂವಿಧಾನದ ಮೂಲ ತಿರುಳನ್ನು ತಿರುಚುವ ಮೂಲಕ ಡಾ.ಅಂಬೇಡ್ಕರ್ ಅವರಿಗೂ ಅವಮಾನ ಮಾಡಿದ್ದಾರೆ. ಇದನ್ನು ಸಮರ್ಥಿಸಿರುವುದು ಶಾಸಕ ಹರೀಶ್ ಪೂಂಜಾ ಅವರ ಉದ್ಧಟತನ ಎಂದು ಆರೋಪಿಸಿದರು.
ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಅನೇಕ ಲೋಪದೋಷಗಳು ಕಂಡು ಬಂದಿದೆ. ಅದನ್ನು ಶಾಸಕ ಹರೀಶ್ ಪೂಂಜಾ ಅವರು ಸಮರ್ಥನೆ ಮಾಡಿದ್ದಾರೆ. ಇತ್ತೀಚೆಗೆ ವೇಣೂರಿನಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭ ರೋಹಿತ್ ಚಕ್ರತೀರ್ಥರನ್ನು ಕಾರ್ಯಕ್ರಮವೊಂದಕ್ಕೆ ಕರೆಸಿದ್ದಾರೆ. ಈ ಸಂದರ್ಭ ದೇವಸ್ಥಾನದ ಪದ್ಮಪ್ರಸಾದ್ ಅಜಿಲರು ಈ ಕಾರ್ಯಕ್ರಮವನ್ನೇ ರದ್ದು ಮಾಡಿದ್ದರು. ಆದರೆ ಹರೀಶ್ ಪೂಂಜಾ ಅವರು ಹಠಕ್ಕೆ ಬಿದ್ದು ಅವರನ್ನು ಕರೆಸಿ ಕಾರ್ಯಕ್ರಮ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನನ್ನ ಮೇಲೆ ಪಠ್ಯಪುಸ್ತಕ ವಿಚಾರದಲ್ಲಿ ವಿವಾದಗಳು ಉಂಟಾದಾಗ ನನ್ನ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಿದ್ದಾರೆ. ಆದ್ದರಿಂದ ಇದಕ್ಕೆಲ್ಲಾ ಕಾರಣವೇ ಹರೀಶ್ ಪೂಂಜಾ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಲ್ಲಾಸ್ ಕೋಟ್ಯಾನ್, ಹಿಂದುಳಿದ ವರ್ಗಗಳ ಹರೀಶ್ ಕೋಟ್ಯಾನ್ ಉಪಸ್ಥಿತರಿದ್ದರು.