ಪುತ್ತೂರು : ವಿಜ್ಞಾನವನ್ನು ಕೇವಲ ಒಂದು ವಿಷಯವಾಗಿ ನೋಡುವುದರ ಬದಲು ಅದನ್ನು ಆಸಕ್ತಿಯ ಕ್ಷೇತ್ರವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಮಾತ್ರವಲ್ಲದೆ ಸಂಶೋಧನೆ ಕೈಗೊಳ್ಳಬೇಕು. ತನ್ಮೂಲಕ ನಮ್ಮ ದೇಶವನ್ನು ಯಶಸ್ಸಿನ ಕಡೆ ಕೊಂಡೊಯ್ಯುಬೇಕು ಎಂದು ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಆಚರಿಸಲಾದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು.
ಸಿವಿ ರಾಮನ್‌ರವರ ಅಪೂರ್ವ ಸಾಧನೆಯ ನೆನಪಿಗೆ ಅಂತರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಸಿಕ್ಕ ಆರಂಭದ ವರ್ಷಗಳಲ್ಲಿ ದಿನಗಳಲ್ಲಿ ವಿಜ್ಞಾನದ ಪ್ರಗತಿ ಅತ್ಯಂತ ನಿಧಾನವಾಗಿ ಸಾಗುತ್ತಿತ್ತು. ಆದರೆ 1962ರಲ್ಲಿ ವಿಕ್ರಂ ಸಾರಾಬಾಯಿ ಅವರ ನೇತೃತ್ವದಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನೆ ಪ್ರಾರಂಭವಾಯಿತು. ತದನಂತರ 1969ರಲ್ಲಿ ಇಸ್ರೋ ಅಸ್ಥಿತ್ವಕ್ಕೆ ಬಂತು. ನಂತರ ನಾನಾ ಬಗೆಯ ವೈಜ್ಞಾನಿಕ ಸಾಧನೆಗಳು ಸಾಧ್ಯವಾಗುತ್ತಾ ಬಂದವು ಎಂದು ನುಡಿದರು.
ಜ್ಞಾನ ಎಂಬುದು ಒಂದು ವಿಷಯ. ಅದು ಪ್ರಯೋಗಕ್ಕೆ ಸಂಬAಧಪಟ್ಟದ್ದಲ್ಲ. ಆದರೆ ಅದಕ್ಕಿಂತಲೂ ಮೀರಿದ್ದು ವಿಜ್ಞಾನ. ಪರಿಸರದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದೇ ವಿಜ್ಞಾನ ಎಂದು ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಭಟ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ ಯಾವುದನ್ನೇ ಆಗಲಿ ಸಾಬೀತುಪಡಿಸಿದರೆ ಮಾತ್ರ ವಿಜ್ಞಾನ ಅದನ್ನು ಒಪ್ಪುತ್ತದೆ. ಆದರೆ ಜ್ಞಾನವನ್ನು ಸಾಬೀತುಪಡಿಸಲು ಯಾವುದೇ ಉಪಕರಣ ಬೇಕಾಗಿಲ್ಲ. ನಾವು ಜ್ಞಾನದ ಹಾದಿಯಲ್ಲಿ ನಡೆಯಬೇಕು. ಜ್ಞಾನವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕು. ಅದುವೇ ಸುಜ್ಞಾನ ಎಂದರು.
ವೇದಿಕೆಯಲ್ಲಿ ಶಾಲಾ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸೌಕರ್ಣಿಕ ಸ್ವಾಗತಿಸಿ, ಪ್ರಿಯಾಂಶು ವಂದಿಸಿದರು. ಆರುಷ್ ಕಾರ್ಯಕ್ರಮ ನಿರೂಪಿಸಿದರು.