ಕಗ್ಗದ ಸಂದೇಶ- ಮನ್ನಣೆಗೆ ತುಡಿವ ಮನ ಪಂಜರದ ಗಿಳಿಯಂತೆ…

ಮನೆಯೊಳೊ ಮಠದೊಳೋ ಸಭೆಯೊಳೋ ಸಂತೆಯೊಳೊ|
ಕೊನೆಗೆಕಾಡೊಳೊ ಮಸಣದೊಳೊ ಮತ್ತೆಲ್ಲೋ||
ಗಣನೆಗೇರಲಿಕೆಂದು ಜನ ತಪಿಸಿ ಕೊರಗುವುದು|
ನೆನೆಯದಾತ್ಮದ ಸುಖವ–ಮಂಕುತಿಮ್ಮ||”

ಜನರು ತಮ್ಮ ಮನೆಯಲ್ಲಿಯೋ, ತಾವಿರುವ ಮಠದಲ್ಲಿಯೋ, ಭಾಗವಹಿಸುವ ಸಭೆಯಲ್ಲೋ ಅಥವಾ ಜನ ಸೇರಿದ ಸಂತೆಯಲ್ಲೋ! ಕೊನೆಗೆ ಕಾಡಿನಲ್ಲಿಯೋ ಅಥವಾ ಸತ್ತು ಮಲಗುವ ಸ್ಮಶಾನದಲ್ಲಿಯೋ ಜನ ತಮ್ಮನ್ನು ಗಮನಿಸಬೇಕು ಮತ್ತು ಗುರುತಿಸಬೇಕು ಎಂದು ಬಯಸುವರು‌. ತಮ್ಮ ಆತ್ಮದ ಸುಖವನ್ನು ನೆನೆಯದೆಯೆ ಬರೀ ಹೆಸರಿಗಾಗಿ ಹಪಾಹಪಿಸುವರು ಎಂದು ಮಾನ್ಯ ಡಿವಿಜಿಯವರು ಮನುಷ್ಯನ ಮನ್ನಣೆಯ ದಾಹವನ್ನು ಈ ಮುಕ್ತಕದಲ್ಲಿ ಬಣ್ಣಿಸಿದ್ದಾರೆ.
‌ ಜನ ತಾವು ಎಲ್ಲೆ ಇರಲಿ ತಮ್ಮನ್ನು ಗುರುತಿಸಬೇಕು ಮತ್ತು ಗೌರವಿಸಬೇಕು ಎಂದು ಬಯಸುತ್ತಾರೆ. ಈ ಮನ್ನಣೆಯ ದಾಹ ಎಲ್ಲಕ್ಕಿಂತ ತೀಕ್ಷ್ಣ ಎನ್ನುವುದನ್ನು ಡಿವಿಜಿಯವರೆ ತಮ್ಮ ಇನ್ನೊಂದು ಕಗ್ಗದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ|
ಚಿನ್ನದಾತುರಕ್ಕಿಂತ ಹೆಣ್ಣು ಗಂಡೊಲವು||
ಮನ್ನಣೆಯ ದಾಹವೀಯೆಲ್ಲಕ್ಕಂ ತೀಕ್ಷ್ಣತಮ|
ತಿನ್ನುವುದು ಅತ್ಮವನೆ- ಮಂಕುತಿಮ್ಮ||































 
 

ಅಂದರೆ ಅನ್ನದ ಆಸೆಗಿಂತ ಚಿನ್ನದ ಆಸೆ ತೀಕ್ಷ್ಣ, ಚಿನ್ನದ ಆಸೆಗಿಂತ ಹೆಣ್ಣು-ಗಂಡುಗಳ ಪರಸ್ಪರ ಪ್ರೀತಿ ತೀಕ್ಷ್ಣ. ಆದರೆ ಮನ್ನಣೆಯ ದಾಹ ಈ ಎಲ್ಲದಕ್ಕಿಂತ ತೀವ್ರತರವಾದದ್ದು. ಇದು ನಮ್ಮ ಆತ್ಮವನ್ನೆ ನಾಶ ಮಾಡುತ್ತದೆ‌ ಎಂದಿದ್ದಾರೆ.

ಮನ್ನಣೆಗೆ ತುಡಿವ ಮನ ಪಂಜರದ ಗಿಳಿಯಂತೆ|
ರಾತ್ರಿ ಸತ್ತಿಗೆಯಂತೆ ಈ ಕೀರ್ತಿವಾರ್ತೆ||
ಎಂದು ಅದು ಹದಗೆಟ್ಟು ಗಾಳಿಸೊಡರಾದೀತೊ|
ಹೊನ್ನಶೂಲವೊ ಕೀರ್ತಿ! – ಮುದ್ದುರಾಮ”

ಎಂಬ ಕೆ ಶಿವಪ್ಪನವರ ನುಡಿಯಂತೆ ಮನ್ನಣೆಯ ಹಪಾಹಪಿ ಹೊನ್ನ ಶೂಲದಂತೆ ಸದಾ ನಮಗೆ ತಿವಿದು ನೋವುಂಟುಮಾಡುತ್ತದೆ. ಮನ್ನಣೆಯ ದಾಹ ನೆಮ್ಮದಿ ಕೆಡಿಸುವ ಪಿಶಾಚಿ‌ ಇದ್ದಂತೆ. ತನ್ನನು ಎಲ್ಲರೂ ಗುರುತಿಸಬೇಕು, ಕೊಂಡಾಡಬೇಕು ಎನ್ನುವ ಬಯಕೆಯನ್ನು ಬಿಟ್ಟು ಅವಕಾಶ ದೊರೆತಾಗ ಜನ ಗುರುತಿಸುವಂತಹ ಸೇವಾಕಾರ್ಯಗಳನ್ನು ನಿಸ್ವಾರ್ಥ ಮನಸ್ಸಿನಿಂದ ಮಾಡಬೇಕು.

ಅವರಿವರ ಕಾಲೊತ್ತಿ ಕೈಮುಗಿದು ನಿಲುವೇಕೆ|
ಮೂರಿಂಚು ಸುದ್ದಿ ನೀ ಪಡೆಯುವುದಕಾಗಿ?
ಗೌರವದ ಗೆರೆ ದಾಟಿ ಪರದಾಡದಿರು ಬಳಿಕ|
ಮಿಗಿಲಾತ್ಮಾಭಿಮಾನ-ಮುದ್ದುರಾಮ”

ಎಂಬ ಕವಿವಾಣಿಯನ್ನು ಅರ್ಥಮಾಡಿಕೊಂಡು ಪ್ರಚಾರದ ಆಸೆಯಿಂದ ಆತ್ಮಾಭಿಮಾನವನ್ನು ತೊರೆದು ಇತರರ ಬೆನ್ನುಹತ್ತಿ ಕೈಕಾಲು ಹಿಡಿಯುವುದನ್ನು ಬಿಡಬೇಕು. ಪ್ರಚಾರ ಮತ್ತು ಪ್ರಶಸ್ತಿ ಗೌರವಗಳಿಗಿಂತ ಆತ್ಮಾಭಿಮಾನ ಶ್ರೇಷ್ಠ ಎನ್ನುವುದನ್ನು ಅರಿತು ಸ್ವಾಭಿಮಾನದಿಂದ ನುಡಿದು ನಡೆದಾಗಲೇ‌ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕೆ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ ಕಾರ್ಕಳ ತಾಲೂಕು ಘಟಕ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top