ಹೈನುಗಾರಿಕೆಗೆ ಪ್ರೋತ್ಸಾಹಕ್ಕಾಗಿ ಗೋಹತ್ಯೆ ನಿಷೇಧ ಕಾಯಿದೆ, ಗೋಶಾಲೆ ನಿರ್ಮಾಣ, ಪಶುವೈದ್ಯಕೀಯ ಕಾಲೇಜು ಸ್ಥಾಪನೆ | ಪಶುವೈದ್ಯಕೀಯ ಇಲಾಖೆಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಿಸಿ ಶಾಸಕ ಸಂಜೀವ ಮಠಂದೂರು|ಗೋ ಪೂಜೆ ನೆರವೇರಿಸಿ ಫಲಾನುಭವಿಗಳಿಗೆ ವಿತರಣೆ

ಪುತ್ತೂರು: ಹೈನುಗಾರಿಕೆಗೆ ವಿಶೇಷ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಗೋಹತ್ಯೆ ನಿಷೇಧ ಕಾಯಿದೆ, ಗೋಶಾಲೆಗಳ ನಿರ್ಮಾಣ, ಪಶುವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದ್ದು ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಫೆ.27ರಂದು ಪಶು ಆಸ್ಪತ್ರೆಯ ಆವರಣದಲ್ಲಿ ದ.ಕ. ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಇದರ ವತಿಯಿಂದ 2022-23ನೇ ಸಾಲಿನ ಅಮೃತಸಿರಿ, ಅಮೃತ ಯೋಜನೆ, ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ಮಲೆನಾಡುಗಿಡ್ಡ ಮಿಶ್ರತಳಿ, ಹಸು ಘಟಕ, ಆಡು ಘಟಕ ಮೊದಲಾದ ಸವಲತ್ತುಗಳ ವಿತರಿಸಿ ಮಾತನಾಡಿದರು.


ಗೋವಿನ ಬಗ್ಗೆ ವಿಶೇಷ ಕಾಳಜಿಯಿಂದ ಸರಕಾರ ಎಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ, ವೈದ್ಯಾಧಿಕಾರಿಗಳ ನೇಮಕ ಮಾಡಲಾಗಿದ್ದರೂ ನ್ಯಾಯಾಲಯದ ಆದೇಶದಿಂದ ತಡೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಿ ವೈದ್ಯಾಧಿಕಾರಿಗಳು ಹಾಗೂ ಸಿಬಂದಿಗಳ ನೇಮಕವಾಗಲಿದೆ ಎಂದರು.
ಪ್ರತಿಯೊಬ್ಬ ರೈತರು ಆರ್ಥಿಕವಾಗಿ ಸ್ವಾಭಿಮಾನಿ, ಸ್ವಾವಲಂಬನೆಯ ಬದುಕಿಗೆ ಪೂರಕವಾಗಿ ಇಲಾಖೆಯ ಸಹಾಯಧನ, ಪ್ರೋತ್ಸಾಹಧನದ ಮೂಲಕ ಸಹಕಾರ ನೀಡಲಾಗುತ್ತಿದೆ. ಕೃಷಿಯ ಜೊತೆಗೆ ಉಪ ಕಸುಬುಗಳನ್ನು ಮಾಡಿ ಜೀವನ ನಡೆಸಲು ವಿವಿಧ ಸವಲತ್ತುಗಳು, ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಯುವಕ-ಯುವತಿಯರು ಹೈನುಗಾರಿಕೆಯಲ್ಲಿ ತೋಡಗಿಸಿಕೊಳ್ಳಬೇಕು. ಈ ಕಾರ್ಯಕ್ರಮದ ಮೂಲಕ ಆತ್ಮನಿರ್ಭರ ಭಾರತ ಆಗಬೇಕು ಎಂದರು.


ಇಲಾಖೆಯ ಸೌಲಭ್ಯಗಳ ಮಾಹಿತಿ ನೀಡಿದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಮಾತನಾಡಿ, ಅಮೃತಸಿರಿ ಯೋಜನೆಯಡಿಯಲ್ಲಿ 10 ಕುಟುಂಬಗಳಿಗೆ ಮಲೆನಾಡು ಗಿಡ್ಡತಳಿ ಹೆಣ್ಣುಕರುಗಳ ವಿತರಣೆ, ವಿಶೇಷ ಘಟಕ ಯೋಜನೆಯಲ್ಲಿ ಪರಿಶಿಷ್ಟ ಜಾತಿಯ ಮೂರು ಮಂದಿಗೆ ಹಸು ಘಟಕ, ಪ.ಪಂಗಡದವರಿಗೆ ಒಬ್ಬರಿಗೆ ಹಸುಘಟಕ, ಪ.ಜಾತಿ ಎರಡು ಮಂದಿಗೆ ಆಡು ಘಟಕ ಹಾಗೂ ಪ.ಪಂಗಡದ ಒಬ್ಬ ಫಲಾನುಭವಿಗೆ ಒಂದು ಹಸು ಘಟಕಗಳನ್ನು ಶೇ.90ರ ಸಹಾಯಧನ ನೀಡಲಾಗುತ್ತಿದೆ. ಸಹಾಯಧನ ನೇರವಾಗಿ ಫಲಾನುಭವಿಯ ಖಾತೆಗೆ ಜಮೆಯಾಗುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಪ.ಜಾತಿ, ಪಂಗಡದವರಿಗೆ ಶೇ.33 ಹಾಗೂ ಸಾಮಾನ್ಯದವರಿಗೆ ಸೇ.25 ಸಹಾಯಧನದಲ್ಲಿ 11 ಫಲಾನುಭವಿಗಳಿಗೆ ಹಸು ಘಟಕಗಳು ಹಾಗೂ ಪ.ಪಂಗಡ ಒಬ್ಬ ಫಲಾನುಭವಿಗೆ ಶೇ.90 ಸಹಾಯ ಧನದಲ್ಲಿ ರಬ್ಬರ್ ಮ್ಯಾಟ್ ವಿತರಿಸಲಾಗುತ್ತಿದ್ದು ಯೋಜನೆಯ ಸಹಾಯಧನಗಳು ನೇರವಾಗಿ ಫಲಾನುಭವಿಗಳ ಖಾತೆ ಜಮೆಯಾಗುತ್ತದೆ. ಆದೇಶ ಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಸ್ವಾಗತಿಸಿ, ಸಿಬಂದಿ ಹೊನ್ನಪ್ಪ ಗೌಡ ವಂದಿಸಿದರು. ಸಿಬಂದಿಗಳು ಸಹಕರಿಸಿದರು. ಸುಮಾರು 29 ಮಂದಿ ಫಲಾನುಭವಿಗಳು ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಂಡರು.































 
 

ಗೋಪೂಜೆ
ಫಲಾನುಭವಿಗಳಿಗೆ ಹಸುಗಳನ್ನು ನೀಡುವ ಮೊದಲು ಆರತಿ ಬೆಳಗಿ, ಗೋ ಪೂಜೆ ನೆರವೇರಿಸಲಾಯಿತು. ಶಾಸಕರು, ಅಧಿಕಾರಿಗಳು ಹಾಗೂ ಫಲಾನುಭವಿಗಳು ಮಲೆನಾಡು ಗಿಡ್ಡ ಮಿಶ್ರತಳಿಯ ಕರುಗಳಿಗೆ ಗೋಪೂಜೆ ನೆರವೇರಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top