ಪುತ್ತೂರು: ಒಡ್ಯ ಸಹಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಫೆ. 25ರಂದು ಗಡಿನಾಡ ಧ್ವನಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟಿನ 6ನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಸೌಮ್ಯ ಪೆರ್ನಾಜೆ ಅವರಿಗೆ ಮಧುಭೂಷಣ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಸಮ್ಮೇಳನಾಧ್ಯಕ್ಷ ಮಲಾರ್ ಜಯರಾಮ್ ರೈ, ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷ ಉಮೇಶ್ ನಾಯಕ್, ಗಡಿನಾಡ ದ್ವನಿ ಅಧ್ಯಕ್ಷ ಡಾ. ಹಾಜಿ ಎಸ್. ಅಬ್ಬೂಬಕ್ಕರ್ ಅರ್ಲಪದವು, ಪ್ರ.ಕಾರ್ಯದರ್ಶಿ ಈಶ್ವರ ಭಟ್ ಕಡಂದೇಲು, ಪಿ.ಜಿ. ಶಂಕರ್ ನಾರಾಯಣ ಭಟ್ ದೈತೋಟ, ಮಹಾಬಲೇಶ್ವರ ಗಿಳಿಯಾಲು ಮೊದಲಾದವರು ಉಪಸ್ಥಿತರಿದ್ದರು.
ಜೇನು ಗಡ್ಡಧಾರಿಯಾಗಿ ಸೌಮ್ಯ ಪೆರ್ನಾಜೆ ಗಮನ ಸೆಳೆದಿದ್ದು, ವಿವಿಧ ಕ್ಷೇತ್ರಗಳಲ್ಲಿ ನಾಡಿಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ನೀಡಲಾಗುವ ಮಧುಭೂಷಣ ರಾಜ್ಯ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. ಈಗಾಗಲೇ ಈಶ್ವರಮಂಗಲ ಗ್ರಾಮ ಸಾಹಿತ್ಯ ಸಂಭ್ರಮದ ಮೂರನೇ ಸರಣಿ ಕಾರ್ಯಕ್ರಮದಲ್ಲೂ ಅವರನ್ನು ಸನ್ಮಾನಿಸಲಾಗಿದೆ. ಅವರು ಹವ್ಯಕ ರತ್ನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕುಮಾರ್ ಪೆರ್ನಾಜೆ ಅವರ ಪತ್ನಿ.