ಮಂಗಳೂರು : ತುರ್ತು ಉದ್ಯೋಗ, ಹೆಚ್ಚು ಹಣ ಗಳಿಸಬೇಕೆಂಬ ಯುವಜನತೆಯ ಆಸೆ ಆದರೆ ಅವರ ಅಗತ್ಯವನ್ನೆ ಅಸ್ತ್ರವನ್ನಾಗಿ ಉಪಯೋಗಿಸುತ್ತಿರುವ ಸೈಬರ್ ವಂಚಕರ ಬಲೆಯು ಕರಾವಳಿಗೂ ವಿಸ್ತರಿಸಿದೆ. ಅರೆಕಾಲಿಕ, ಪೂರ್ಣಕಾಲಿಕ ಉದ್ಯೋಗ ಎಂಬ ಜಾಹಿರಾತಿನ ಮೂಲಕ ಡಿಜಿಟಲ್ ಜಾಹಿರಾತಿನ ಮೂಲಕ ಸಮಾಜಿಕ ಜಾಲತಾಣದಲ್ಲಿ ಸದಸ್ಯರನ್ನಾಗಿಸಿಕೊಂಡು, ಖಾತೆ ತೆರೆದು ಅದರಲ್ಲಿಯೆ ಹಣದ ವ್ಯವಹಾರ ನಮೂದಿಸುತ್ತಿರುವಂತೆ ತೋರಿಸಿ, ಹೂಡಿಕೆ ಮಾಡುವ ಹಣವನ್ನು ದ್ವಿಗುಣವಾಗುತ್ತದೆ ಎಂದು ನಂಬಿಸುತ್ತಾರೆ. ಕೆಲವೊಂದು ಸಲ ಪ್ರಾರಂಭಿಕ ಹಣವನ್ನು ವಾಪಾಸ್ ನೀಡುತ್ತಾರೆ. ಮತ್ತೊಮ್ಮೆ ದ್ವಿಗುಣಗೊಂಡ ಹಣವನ್ನು ಆನ್‌ಲೈನ್‌ನಲ್ಲಿರುವ ಖಾತೆಯಲ್ಲಿಯೂ ತೋರಿಸುತ್ತಾರೆ. ಇದರಿಂದ ಹೂಡಿಕೆದಾರರರ ವಿಶ್ವಾಸಗಳಿಸಿ ಹೆಚ್ಚು ಹೂಡಿಕೆ ಮಾಡಲು ಪ್ರೇರಪಿಸುತ್ತಾರೆ.
ಬಳಿಕ ಹೂಡಿದ ಹಣವೇ ಸಿಗುವುದಿಲ್ಲ ಮತ್ತು ವೆಬ್‌ಸೈಟ್ ಲಿಂಕ್ ಕೂಡ ಸಿಗುವುದಿಲ್ಲ. ಈ ಜಾಲಕ್ಕೆ ಕರಾವಳಿ ಭಾಗದ ಯುವಜನತೆ ಸಿಕ್ಕಿಬೀಳುತ್ತಿರುವುದು ವಿಷಾದನೀಯ. ಈ ವಿಚಾರವು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದ್ದು, ವಿವಿಧ ಕಳ್ಳದಾರಿಯ ಮೂಲಕ ಅಧ್ಯಯನ ಮಾಡುವ ವಂಚಕರು ಅದಕ್ಕೆ ತಕ್ಕಂತೆ ಬಲೆ ಹೆಣೆಯುತ್ತಾರೆ ಎಂದು ಭದ್ರತಾ ತಜ್ಞರು ತಿಳಿಸುತ್ತಾರೆ.
ಫೋನ್‌ನಲ್ಲಿರುವ ಮಾಹಿತಿ ಎಲ್ಲವೂ ಸುರಕ್ಷಿತವಲ್ಲ, ಜಾಲತಾಣದಲ್ಲಿ ಕೆಲವೊಂದನ್ನು ಡೌನ್‌ಲೋಡ್ ಮಾಡುವಾಗ ನಾವೇ ಕೆಲವು ಪರ್ಮಿಷನ್ ನೀಡಿರುತ್ತೇವೆ. ಕೆಮರಾ, ಜಿಪಿಎಸ್, ಲೋಕೇಶನ್, ಗ್ಯಾಲರಿ, ಎಸ್‌ಎಂಎಸ್ ಮೊದಲಾದ ಪರ್ಮಿಷನ್‌ಗಳನ್ನು ಕೇಳಿರುವ ಸಂದರ್ಭದಲ್ಲಿ ಅದನ್ನು ನೀಡಿರುತ್ತೇವೆ. ಇದರಿಂದಾಗಿ ನಮ್ಮ ಮೊಬೈಲ್‌ನ ಹಲವು ಚಟುಚಟಿಕೆಗಳನ್ನು ಕದಿಯುವ ಅಪಾಯವಿರುತ್ತದೆ. ನಾವು ಡೌನ್‌ಲೋಡ್ ಮಾಡುವ ಆ್ಯಪ್ ನವರೆ ಮಾಹಿತಿ ಕದ್ದು ಬೇರೆಯವರಿಗೆ ಮಾರಾಟಮಾಡುವ ಸಂಭವವಿರುತ್ತದೆ ಎಂದು ಸೈಬರ್ ತಜ್ಞ ಡಾ. ಅನಂತ ಜಿ. ಪ್ರಭು ಅವರು ತಿಳಿಸಿದ್ದಾರೆ. ಅದಕ್ಕಾಗಿ ಯಾವುದೇ ಅನಧಿಕೃತ ಸೈಟ್‌ಗಳಲ್ಲಿ ವ್ಯವಹಾರ ನಡೆಸಲೇಬಾರದು.
ಪರಿಶೀಲನೆ ನಡೆಸಿಯೇ ಮುಂದುವರಿಯಬೇಕು ಮತ್ತು ಸಂಶಯ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರೆ ಅದನ್ನು ದೃಢೀಕರಿಸಿ ಸೂಕ್ತ ಸಲಹೆ ನೀಡುತ್ತೇವೆ ಮತ್ತು ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಆಮಿಷಗಳಿಗೆ ಒಳಗಾಗದೆ ಎಚ್ಚರವಿರಬೇಕು ಎಂದು ದ.ಕ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸೈಬರ್ ಕ್ರೈಂ ಹೆಲ್ಪ್ ಲೈನ್ 1930ಕ್ಕೆ ಕರೆ ಮಾಡಬಹುದಾಗಿದೆ.