ಬೆಳಗಾವಿ: ಸಣ್ಣ ರೈತರ ಆರ್ಥಿಕ ಕೃಷಿಗಾರಿಕೆಗೆ ಹಣಕಾಸು ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನೀಡುತ್ತಿರುವ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆಗೆ ಕೊಂಚ ತಡವಾಗಿದೆ. ಕಳೆದ ತಿಂಗಳೇ ಕಂತು ಬಿಡುಗಡೆ ಆಗಬೇಕಿತ್ತು. ಆದರೆ, ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಫೆ. 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಆಗಮಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ.
ನಾಳೆ ಬೆಳಗಾವಿ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ದೇಶದ 8 ಸಾವಿರ ರೈತರಿಗೆ 16 ಸಾವಿರ ಕೋಟಿ ರೂ. ಬಿಡುಗಡೆಯಾಗಲಿದೆ.
2019ರಲ್ಲಿ ಆರಂಭಗೊಂಡ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಈವರೆಗೆ 2 ಸಾವಿರ ರೂಗಳ 12 ಕಂತು ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. 2022ರ ಅಕ್ಟೋಬರ್ 17ರಂದು 12ನೇ ಕಂತಿನ 2 ಸಾವಿರ ರೂ ಹಣವನ್ನು 8 ಕೋಟಿ ರೈತರ ಬ್ಯಾಂಕ್ ಖಾತೆಗೆ ಹಾಕಲಾಗಿತ್ತು. ಅಷ್ಟೂ ಸೇರಿ ಒಟ್ಟು ಮೊತ್ತವಾದ 16 ಸಾವಿರ ಕೋಟಿ ರೂ ಅನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಕೆವೈಸಿ ಭರ್ತಿ ಮಾಡಲು ಕೋರಲಾಗಿದ್ದು, ಅದಕ್ಕೆ ಕೊನೆಯ ದಿನಾಂಕ ಫೆ. 10ರಂದು ಇತ್ತು. ಕೆವೈಸಿ ಯಶಸ್ವಿಯಾಗಿದ್ದವರಿಗೆ ಈ 13ನೇ ಕಂತಿನ ಹಣ ಸಿಗುತ್ತದೆ.