ಪುತ್ತೂರು : ಕಲೆ ಜೀವಂತವಿರಬೇಕಾದರೆ, ಉಳಿಯಬೇಕಾದರೆ ಕಲಾ ಪೋಷಕರು, ಅಭಿಮಾನಿಗಳು, ಕಲಾವಿದರ ಕೂಡುವಿಕೆ ಅಗತ್ಯ. ಇದರಿಂದ ಕಲೋತ್ಸವ ನಡೆಯಲು ಸಾಧ್ಯ ಎಂದು ಮಂಗಳೂರು ಕೆಎಂಸಿಯ ಎಂಡಿ ಡಾ.ಎಂ.ಚಕ್ರಪಾಣಿ ಅಭಿಪ್ರಾಯಪಟ್ಟರು.

ಅವರು ಶನಿವಾರ ಸಂಜೆ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ವತಿಯಿಂದ ಮೂರು ದಿನಗಳ ಕಾಲ ನಡೆಯುವ 19ನೇ ವರ್ಷದ ಸಾಂಸ್ಕೃತಿಕ ಕಲಾಸಂಭ್ರಮ ಕಲೋಪಾಸನಾ-2023 ನ್ನು ಎಸ್‌ಡಿಪಿ ರೆಮಿಡೀಸ್ ರಿಸರ್ಚ್ ಸೆಂಟರ್ ಆವರಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನಾಡಿನ ಉತ್ತಮ ಕಲಾವಿದರನ್ನು ಕರೆಸಿ ಸಂಗೀತ, ಯಕ್ಷಗಾನ ರಸದೌತಣವನ್ನು ಕಲಾಭಿಮಾನಿಗಳಿಗೆ ನೀಡುವ ಜತೆಗೆ ಕಲೆಯನ್ನು ಉಳಿಸಿ ಬೆಳೆಸುವ ಸಂಸ್ಥೆಯ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ಅವರ ಕಾರ್ಯ ಮೆಚ್ಚುವಂತದ್ದು ಎಂದರು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ.ಹರಿಕೃಷ್ಣ ಪಾಣಾಜೆ, ರೂಪಲೇಖಾ, ಡಾ.ಗೋಪಾಲ್ ಪಣಿಕ್ಕರ್ ದಂಪತಿ, ಮೇಘನಾ ಉಪಸ್ಥಿತರಿದ್ದರು. ನಿವೃತ್ತ ಪ್ರಿನ್ಸಿಪಾಲ್ ಡಾ.ಮಾಧವ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆ ಬಳಿಕ ಪದ್ಮಭೂಷಣ, ಸಂಗೀತ ಕಲಾನಿಧಿ ವಿದುಷಿ ಸುಧಾ ರಘುನಾಥನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಜರಗಿತು. ವಿದ್ವಾನ್ ಎಂಬಾರ್ ಕಣ್ಣನ್ (ವಯಲಿನ್), ವಿದ್ವಾನ್ ನೈವೇಲಿ ಎಸ್.ಸ್ಲಂದಸುಬ್ರಹ್ಮಣ್ಯನ್ (ಮೃದಂಗ) ಹಾಗೂ ವಿದ್ವಾನ್ ಆರ್. ರಮಣ್ (ಘಟಂ)ನಲ್ಲಿ ಸಾಥ್ ನೀಡಿದರು.