ಸೇವಿಸಿದವರು ಮತ್ತು ಸಾಗಿಸಿದವರು ಒಂದು ತಿಂಗಳ ಮಟ್ಟಿಗೆ ಡಿಬಾರ್
ಮಂಗಳೂರು : ಕ್ಯಾಂಪಸ್ ಪರಿಸರದಲ್ಲಿ ಮಾದಕ ವಸ್ತು ಸೇವಿಸಿದ ಮತ್ತು ಮಾದಕ ವಸ್ತು ಪೆಡ್ಲರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ 42 ವಿದ್ಯಾರ್ಥಿಗಳನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಒಂದು ತಿಂಗಳ ಮಟ್ಟಿಗೆ ಕಾಲೇಜಿನಿಂದ ಅಮಾನತುಗೊಳಿಸಿದೆ.
ಈ ದಿಟ್ಟ ಕ್ರಮದಿಂದ ಸಮಾಜಕ್ಕೆ ಬಲವಾದ ಸಂದೇಶ ರವಾನೆಯಾಗುತ್ತದೆ ಹಾಗೂ ಮಾದಕ ವಸ್ತುಗಳ ಸೇವನೆಯ ವಿರುದ್ಧ ಜಾಗೃತಿ ಮೂಡಿಸುತ್ತದೆ. ಉಡುಪಿಯಲ್ಲಿ ಡ್ರಗ್ಸ್ ಹಾವಳಿಗೆ ಕೆಲವು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹಾಕೇ ಅಕ್ಷಯ್ ಮಚ್ಚೀಂದ್ರ ತಿಳಿಸಿದ್ದಾ.
ಮಾಹೆ ಅಧಿಕಾರಿಗಳು ಮಾದಕ ದ್ರವ್ಯ ಸೇವನೆ ವಿರುದ್ಧ ಶೂನ್ಯ ಸಹಿಷ್ಣು ನೀತಿಯ ಭಾಗವಾಗಿ ಆಂತರಿಕ ತನಿಖೆಯನ್ನು ನಡೆಸಿ ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ವಿದ್ಯಾರ್ಥಿಗಳನ್ನು ಆಂತರಿಕ ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಇತರರಂತೆ ಸಾಮಾನ್ಯ ಜೀವನವನ್ನು ನಡೆಸುವಂತೆ ಪರಿವರ್ತಿಸಲು ಅವರನ್ನು ಮಾಹೆ ಆಪ್ತ ಸಲಹೆಗಾರರ ಬಳಿಗೆ ಕಳುಹಿಸುವಂತೆ ಸೂಚಿಸಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ.
ಮಾಹೆ ತನ್ನ ಆಂತರಿಕ ಶಿಸ್ತು ಸಮಿತಿಯ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಗೆ ಮಾಹೆ ಆಡಳಿತ ಮಂಡಳಿ ಸಹಕಾರ ನೀಡಿದ್ದು, ಮಾದಕ ದ್ರವ್ಯ ಸೇವನೆ ವಿರುದ್ಧ ಜಾಗೃತಿ ಮೂಡಿಸಲು ಪೊಲೀಸರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.