ಪುತ್ತೂರು: ಗುರುವಾರ ಸಂಜೆ ಸೆರೆ ಸಿಕ್ಕ ಕಾಡಾನೆಯ ದಂತದಲ್ಲಿದ್ದ ರಕ್ತದ ಕಲೆಗಳು, ಕೊಲೆಗಡುಕ ಎನ್ನುವುದನ್ನು ಖಾತ್ರಿ ಪಡಿಸಿವೆ.
ರೆಂಜಿಲಾಡಿಯ ನೈಲದಲ್ಲಿ ರಂಜಿತಾ ಹಾಗೂ ರಮೇಶ್ ರೈ ಎನ್ನುವವರನ್ನು ಕಾಡಾನೆ ಕೊಂದು ಹಾಕಿತ್ತು. ರಂಜಿತಾ ಅವರ ಬೊಬ್ಬೆ ಕೇಳಿ ಓಡಿ ಬಂದ ರಮೇಶ್ ರೈ ಅವರು ಆನೆಯ ತಿವಿತಕ್ಕೆ ಕೊನೆಯುಸಿರೆಳೆದಿದ್ದರು. ಬಳಿಕ ಆನೆಗಳು ಪರಾರಿಯಾಗಿದ್ದು, ಕಾರ್ಯಾಚರಣೆ ವೇಳೆಯಲ್ಲೂ ಬಲೆಗೆ ಬಿದ್ದಿರಲಿಲ್ಲ. ಗುರುವಾರ ಸಂಜೆ ಹೊತ್ತಿಗೆ ಆನೆಯನ್ನು ಪತ್ತೆ ಹಚ್ಚಿ, ಅರಿವಳಿಕೆ ಚುಚ್ಚುಮದ್ದು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 40 ವರ್ಷ ಪ್ರಾಯದ ಗಂಡಾನೆ ಇದಾಗಿದೆ. ಸ್ಥಳೀಯರು ನೀಡಿದ ಮಾಹಿತಿಯನ್ನು ಆಧರಿಸಿ, ಡ್ರೋನ್ ಕ್ಯಾಮರಾ ಮೂಲಕ ಆನೆಯ ಚಲನವಲನ ಪತ್ತೆ ಮಾಡಲಾಯಿತು. ಬಳಿಕ ಆನೆಯ ಜಾಡು ಹಿಡಿದು, ಅರಿವಳಿಕೆ ಚುಚ್ಚುಮದ್ದನ್ನು ಶೂಟ್ ಮಾಡಲಾಯಿತು. ಸ್ಮೃತಿ ತಪ್ಪಿ ಬಿದ್ದ ಆನೆಯ ಕಾಲು ಹಾಗೂ ಕುತ್ತಿಗೆಗೆ ಸೆಣಬಿನ ಹಗ್ಗದಿಂದ ಬಿಗಿಯಲಾಯಿತು.
ಕೆಲ ಸಮಯಗಳ ಬಳಿಕ ಆನೆಗೆ ಪ್ರಜ್ಞೆ ಬಂದಿದ್ದು, ಎದ್ದು ನಿಂತಿದೆ. ಬಳಿಕ ಶಿಬಿರದ ಆನೆಗಳ ಸಹಕಾರದಿಂದ ಆನೆಯನ್ನು ಪಳಗಿಸಲಾಯಿತು. ರಾತ್ರಿ ಹೊತ್ತು ಆನೆಯನ್ನು ಲಾರಿಗೆ ಲೋಡ್ ಮಾಡಿ, ರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿಯ ಆನೆ ಶಿಬಿರಕ್ಕೆ ತರಲಾಗಿದೆ.
ಆನೆಗಳು ಗುಂಪಿನಲ್ಲಿ ಸಾಗುತ್ತವೆ ಎನ್ನುವುದು ಎಲ್ಲರೂ ತಿಳಿದಿರುವ ಸತ್ಯ. ಈ ಗಂಡಾನೆಯೂ ಗುಂಪಿನಲ್ಲಿತ್ತೇ ಅಥವಾ ಗುಂಪಿನಿಂದ ಪ್ರತ್ಯೇಕವಾಗಿತ್ತೇ ಎನ್ನುವ ಮಾಹಿತಿಯ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಸೆರೆ ಸಿಕ್ಕ ಗಂಡಾನೆ, ನೈಲದ ಬಳಿಕ ಇಬ್ಬರನ್ನು ಹತ್ಯೆಗೈದ ಹಂತಕ ಎನ್ನುವುದು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಪಷ್ಟಪಡಿಸಿದ್ದಾರೆ. ಆನೆಯ ಕಾಲು ಹಾಗೂ ಕೋರೆ ಅಥವಾ ದಂತದಲ್ಲಿದ್ದ ರಕ್ತದ ಕಲೆಗಳೇ ಇದಕ್ಕೆ ಸಾಕ್ಷಿ.
ಗುರುವಾರ ಕಾರ್ಯಾಚರಣೆ ನಡೆಯುತ್ತಿದ್ದ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಬಳಿಕ ಸಾಕಾನೆಗಳನ್ನು ಆ ಪ್ರದೇಶದಲ್ಲಿ ಕೊಂಡೊಯ್ದು ಕಾರ್ಯಾಚರಣೆ ಮಾಡಲಾಯಿತು.