ಪುತ್ತೂರು: ಅಭಿಮನ್ಯು ಸಹಿತ ದುಬಾರೆಯ 5 ಆನೆಗಳ ಸಹಾಯದಿಂದ ಕಳೆದ 3 ದಿನಗಳಿಂದ ಕಡಬ ರಕ್ಷಿತಾರಣ್ಯದಲ್ಲಿ ನಡೆಯುತ್ತಿರುವ ಕಾಡಾನೆ ಕಾರ್ಯಾಚರಣೆ ಕೊನೆಗೂ ಯಶಸ್ವಿ ಕಂಡಿದೆ. ನರಹಂತಕ ಕಾಡಾನೆಯನ್ನು ಅರಣ್ಯ ಇಲಾಖೆ ಗುರುವಾರ ಸಂಜೆ ಸೆರೆ ಹಿಡಿದಿದೆ.
ಕಡಬ ತಾಲೂಕಿನ ರೆಂಜಿಲಾಡಿಯ ನೈಲ ಎಂಬಲ್ಲಿ ಫೆ. 20ರಂದು ರಂಜಿತಾ (21) ಹಾಗೂ ರಮೇಶ್ ರೈ (52) ಎಂಬವರನ್ನು ಕಾಡಾನೆ ಕೊಂದು ಹಾಕಿತ್ತು. ಸ್ಥಳೀಯರ ಒತ್ತಾಯದ ಮೇರೆಗೆ ಅಷ್ಟರಲ್ಲಿ ಅಲ್ಲಿಗಾಗಮಿಸಿದ ಆನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ 3 ದಿನ ಕಾರ್ಯಾಚರಣೆ ನಡೆಸಿದರೂ, ಯಾವುದೇ ಪ್ರಯೋಜನ ಕಂಡಿರಲಿಲ್ಲ.
ಗುರುವಾರ ಡ್ರೋಣ್ ಕ್ಯಾಮರಾ ಮೂಲಕ ಆನೆಯನ್ನು ಪತ್ತೆಹಚ್ಚಲಾಯಿತು. ಬಳಿಕ ಆನೆಗೆ ಶೂಟ್ ಮಾಡುವ ಮೂಲಕ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು. ಇದೀಗ ಆನೆಯು ಅರಣ್ಯ ಇಲಾಖೆಯ ಕಣ್ಗಾವಲಿನಲ್ಲಿದೆ ಎಂದು ಹೇಳಲಾಗಿದೆ.