ಪುತ್ತೂರು: ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ಸಮೀಪದ ಕಟ್ಟಡದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಿ, ಅದರಲ್ಲಿ ಇಸ್ಲಾಂ ಮತಪ್ರವಚನ ನೀಡಿದ ಘಟನೆಗೆ ಸಂಬಂಧಪಟ್ಟಂತೆ ಶಾಲಾ ಮುಖ್ಯಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಅಡ್ಯನಡ್ಕ ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿಗಳು ಅಧ್ಯಕ್ಷರ ಅನುಮತಿ ಮೇರೆಗೆ ಈ ಆದೇಶ ಹೊರಡಿಸಿದ್ದಾರೆ. ಆದ್ದರಿಂದ ಪ್ರೌಢಶಾಲಾ ಮುಖ್ಯಶಿಕ್ಷಕ ಟಿ.ಆರ್. ನಾಯ್ಕ್ ಅವರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳ್ಳಲಿದ್ದಾರೆ.
ಫೆ. 18ರಂದು 10ನೇ ತರಗತಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಶಾಲಾ ಮುಖ್ಯಶಿಕ್ಷಕ ಟಿ.ಆರ್. ನಾಯ್ಕ್ ಅವರು ಕಾರ್ಯಾಗಾರಕ್ಕೆ ಕಳುಹಿಸಿಕೊಟ್ಟಿದ್ದರು. ಆ ಕಾರ್ಯಾಗಾರದಲ್ಲಿ ಇಸ್ಲಾಂ ಮತಪ್ರಚನ ನಡೆಸುತ್ತಿದ್ದು ಗಮನಕ್ಕೆ ಬಂದಿದ್ದು, ಸ್ಥಳೀಯರು ಹಾಗೂ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣ ಠಾಣೆ ಮೆಟ್ಟಿಲೇರಿತ್ತು.
ನುಸ್ರುತುಲ್ ಇಸ್ಲಾಮಿಕ್ ಯಂಗ್ ಮೆನ್ಸ್ ಅಸೋಸಿಯೇಷನ್ (NIYA) ಶೈಕ್ಷಣಿಕ ಕಾರ್ಯಾಗಾರ ಆಯೋಜಿಸಿದ್ದು, ಇದಕ್ಕೆ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ತೆರಳುವಂತೆ ಪ್ರಾಂಶುಪಾಲ ರುದ್ರಪ್ಪ ನಾಯ್ಕ್ ತಿಳಿಸಿದ್ದಾರೆ ವಿದ್ಯಾರ್ಥಿಗಳು ದೂರಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಇದೇ ವಿಚಾರವನ್ನು ಮುಂದಿಟ್ಟುಕೊಂಡು ಶಾಸಕ ಯು.ಟಿ. ಖಾದರ್ ಅವರು ಸದನದಲ್ಲಿ ಪ್ರಸ್ತಾಪಿಸಿ, ಹಿಂದೂ ಸಂಘಟನೆಗಳ ದಾಳಿ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದರು. ಆದರೆ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಶಾಸಕ ಸಂಜೀವ ಮಠಂದೂರು ಅವರು, ಘಟನೆಯ ಸತ್ಯಾಸತ್ಯತೆಯನ್ನು ತಿಳಿಸಿದ್ದರು. ಮಾತ್ರವಲ್ಲ, ಹಿಂದೂ ಸಂಘಟನೆಗಳಿಗೆ ಬೆಂಬಲವನ್ನು ಸೂಚಿಸಿದ್ದರು.