ಪುತ್ತೂರು : ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿ ಸಮೀಪದ ನೈಲದಲ್ಲಿ ಸೋಮವಾರ ಮುಂಜಾನೆ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ದಾಳಿ ನಡೆಸಿದ ಕಾಡಾನೆಯನ್ನು ಸೆರೆಹಿಡಿಯಲು ಮೈಸೂರು ಹಾಗೂ ದುಬಾರೆಯಿಂದ ಪಳಗಿನ ಆನೆಗಳನ್ನು ತರಿಸಲಾಗಿದೆ.
ಸೋಮವಾರ ರಾತ್ರಿಯೇ ಬೃಹತ್ ಲಾರಿಗಳ ಮೂಲಕ ಮೈಸೂರು ಹಾಗೂ ದುಬಾರೆಯಿಂದ ಐದು ಆನೆಗಳು ಆಗಮಿಸಿದ್ದು, ಮಂಗಳವಾರ ಬೆಳಿಗ್ಗೆಯಿಂದ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಗೊಂಡಿದೆ.
ಸೋಮವಾರ ಬೆಳಿಗ್ಗೆ ಕಾಡಾನೆ ದಾಳಿಯಿಂದ ಕಡಬ ತಾಲೂಕಿನ ರೆಂಜಲಾಡಿ ಗ್ರಾಮದ ನೈಲ ನಿವಾಸಿಗಳಾದ ರಂಜಿತಾ (21) ಹಾಗೂ ರಮೇಶ್ ರೈ(55) ಮೃತಪಟ್ಟಿದ್ದರು. ಇದರಿಂದ
ಆಕ್ರೋಶಗೊಂಡ ಸ್ಥಳೀಯರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಯನ್ನು ಸ್ಥಳಾಂತರಗೊಳಿಸದೆ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಮಣಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಯನ್ನು ಸ್ಥಳಾಂತರಿಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಮೃತದೇಹವನ್ನು ವಾರಸುದಾರರಿಗೆ ನೀಡಲಾಗಿತ್ತು.