ಪುತ್ತೂರು : ಯಕ್ಷಗಾನ ಅಕಾಡೆಮಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷರಂಗದ ದಿಗ್ಗಜ ಪುತ್ತೂರು ಡಾ.ಶ್ರೀಧರ್ ಭಂಡಾರಿ ಅವರ 2ನೇ ವರ್ಷದ ಅನುಸ್ಮರಣಾ ಕಾರ್ಯಕ್ರಮ ಹಾಗೂ ಡಾ.ಶ್ರೀಧರ ಭಂಡಾರಿ “ಯಕ್ಷದೇಗುಲ” ಪ್ರಶಸ್ತಿ ಪ್ರದಾನ, ಯಕ್ಷ ರಕ್ಷಾ ನಿಧಿ ವಿತರಣೆ ಭಾನುವಾರ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಿತು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಶ್ರೀಧರ ಭಂಡಾರಿಯವರ ನೆನಪುಗಳು ಇನ್ನೂ ಹಸಿರಾಗಿರುವುದಕ್ಕೆ ಅವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ, ಪಡೆದ ಸಾಧನೆ ಕಾರಣವಾಗಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ಹಾಗೂ ನಿಧಿ ಸಮರ್ಪಣೆ ಕಾರ್ಯಕ್ರಮ ಅವರ ನೆನಪನ್ನು ಮತ್ತಷ್ಟು ಕಾಡುತ್ತದೆ. ತನ್ನದೇ ಆದ ರಿತಿಯಲ್ಲಿ ಪಾತ್ರಗಳನ್ನು ನಿರೂಪಿಸಿದ ವರು, ರಂಗದಲ್ಲಿ ತನ್ನದೇ ಆದ ಶೈಲಿಯಲ್ಲಿ ಪಾತ್ರವನ್ನು ತೋರಿಸಿಕೊಟ್ಟು ಮುಂದಿನ ಪೀಳಿಗೆಗೆ ವರ್ಗಾಯಿಸಿದ್ದಾರೆ. ಕಲಾವಿದ ಮಾತ್ರವಲ್ಲದೆ ಅತ್ಯುನ್ನತ ಸಜ್ಜನ ಸಹೃದಯ ವ್ಯಕ್ತಿಯಾಗಿದ್ದು, ಮನಸ್ಸಿನಲ್ಲಿ ಉಳಿಸಿಕೊಳ್ಳುವ ಸೇವೆಯನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ್ದಾರೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ತುಳುನಾಡು ಎಂದರೆ ಯಕ್ಷಗಾನ. ಯಕ್ಷಗಾನ ಇಲ್ಲದಿದ್ದರೆ ತುಳುನಾಡು ಇಲ್ಲ. ಕಲಾ ಸೇವೆ ನೀಡುವ ಈ ನಾಡಿನಲ್ಲಿ ನಾಗಾರಾಧನೆ, ಭಜನೆ, ಭೂತಾರಾಧನೆ ಮಾಡುತ್ತಿದ್ದೇವೆ. ಯಕ್ಷಾಗಾನ ಆಡಿಸುವ ಮೂಲಕ ದೇವರನ್ನು ಕಾಣುವ ನಂಬಿಕೆ ಇದೆ. ಶ್ರೀಧರ ಭಂಡಾರಿಯವರ ಮಕ್ಕಳಿಂದ ಕಲಾಸೇವಕರನ್ನು ಆರಾಧಿಸುವ ಕೆಲಸ ಆಗುತ್ತಿರುವ ಉತ್ತಮ ಕಾರ್ಯ ಎಂದರು.
ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿ, ಸ್ವ ಪ್ರಯತ್ನದಿಂದ ಉತ್ತಮ ಪ್ರದರ್ಶನ ನೀಡಿ ಜನಮಾನಸದಲ್ಲಿ ಉಳಿದುಕೊಂಡವರು ಶ್ರೀಧರ ಭಂಡಾರಿಯವರು. ಇವತ್ತಿನ ವಾಟ್ಸ್ಆಪ್ ಗ್ರೂಪ್ ನಲ್ಲಿ ವೈಭವೀಕರಿಸಲ್ಪಟ್ಟ ಕಲಾವಿದರಲ್ಲ ಎಂದರು. ಈ ಸಂದರ್ಭದಲ್ಲಿ ಟಿ.ಶ್ಯಾಮ್ ಭಟ್ ಅವರನ್ನು ಶ್ರೀಧರ ಭಂಡಾರಿ ಮನೆಯವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಹಿರಿಯ ಭಾಗವತಿಕೆಗಾರ ಕುರಿಯ ಗಣಪತಿ ಶಾಸ್ತ್ರಿ ಅವರಿಗೆ ಯಕ್ಷದೇಗುಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಶ್ರೀಧರ ಭಂಡಾರಿಯವರ ಮನೆಯವರು ಕುರಿಯ ಮನೆತನವನ್ನು ಗುರುತಿಸುವುದು ಸಂತೋಷ. ಇದು ಯಕ್ಷಗಾನ ಕ್ಷೇತ್ರ ಹಾಗೂ ಕಲಾವಿದರಿಗೆ ನೀಡಿದ ಸನ್ಮಾನ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ನ್ಯಾಯವಾದಿ ಮಹೇಶ್ ಕಜೆ ಮಾತನಾಡಿದರು. ಶ್ರೀಧರ ಭಂಡಾರಿ ಅವರ ಪುತ್ರಿ ಅನಿಲಾ ದೀಪಕ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಾಸಿ ಕಲಾವಿದ, ಶ್ರೀಧರ ಭಂಡಾರಿಯವರ ಶಿಷ್ಯ ಬೆಂಗಳೂರಿನ ಚಿದಾನಂದ ಕಾಮತ್ ಸಾಂದರ್ಭಿಕವಾಗಿ ಮಾತನಾಡಿದರು. ಶ್ರೀಧರ ಭಂಡಾರಿಯವರ ಪತ್ನಿ ಉಷಾ ಶ್ರೀಧರ್ ಭಂಡಾರಿ, ಪುತ್ರ ದೇವಿಪ್ರಕಾಶ್ ಭಂಡಾರಿ, ಕೋಕಿಲಾ ಜಯವರ್ಧನ್, ಶಾಂತನಾ ಸಚ್ಚಿದಾನಂದ ಶೆಟ್ಟಿ, ಜಯವರ್ಧನ್, ದೀಪಕ್ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಅರ್ಪಿತಾ ಶೆಟ್ಟಿ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹನುಮಗರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಿತು.