ಪುತ್ತೂರು : ಪುತ್ತೂರು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಕರಾವಳಿ ಕಾರಣಿಕ ವೀರ ಪುರುಷರಾದ ಕೋಟಿ – ಚೆನ್ನಯ ನಾಮಕರಣ ಮಾಡುವ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆ ಸೋಮವಾರ ಬೆಳಿಗ್ಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಈಗಾಗಲೇ ನಗರದ ಬಸ್ ನಿಲ್ದಾಣಕ್ಕೆ ಕಾರಣಿಕ ವೀರ ಪುರುಷರಾದ ಕೋಟಿ – ಚೆನ್ನಯ ಅವರ ಹೆಸರಿಡುವ ಕುರಿತು ಸಮಾನ ಮನಸ್ಕರ ಆಶಯದಂತೆ ಚರ್ಚೆಗಳು ನಡೆದಿವೆ. ಅದರಂತೆ ಸದ್ಯದಲ್ಲೇ ನಾಮಕರಣಗೊಳಿಸುವ ಪ್ರಕ್ರಿಯೆ ನಡೆಸಲಾಗುವುದು. ಗರಡಿಯನ್ನು ಅಲಂಕಾರ ಮಾಡಿದ ಹಾಗೆ ಉತ್ತಮ ರೀತಿಯಲ್ಲಿ ಅಲಂಕಾರ ಮಾಡಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಬಸ್ ನಿಲ್ದಾಣಕ್ಕೆ ಕೋಟಿ – ಚೆನ್ನಯರ ಹೆಸರು ಇಡುವುದು ನಗರಸಭೆಗೂ ಶೋಭೆ ತರುವ ವಿಷಯವಾಗಿದೆ ಎಂದರು.
ವೇದಿಕೆಯಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪೌರಾಯುಕ್ತ ಮಧು ಎನ್. ಮನೋಹರ್, ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ತಾಲೂಕು ಪಂಚಾಯಿತಿ ಯೋಜನಾ ನಿರ್ದೇಶಕಿ ಸುಕನ್ಯಾ ಉಪಸ್ಥಿತರಿದ್ದರು.
ಸಭೆಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಒಬಿಸಿ ಮೋರ್ಚಾದ ಆರ್.ಸಿ.ನಾರಾಯಣ, ಉದ್ಯಮಿ ಜಯಂತ ನಡುಬೈಲು, ಚಂದ್ರಶೇಖರ ರಾವ್ ಬಪ್ಪಳಿಗೆ, ಸಂಜೀವ ಪೂಜಾರಿ ಕೂರೇಲು, ಬಿಲ್ಲವ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.