ಜಡೇಜಾ ಎಂಬ ಫೈಟಿಂಗ್ ಸ್ಪಿರಿಟ್

ಕಮ್‌ಬ್ಯಾಕ್‌ನಲ್ಲಿ ದೈತ್ಯ ಸಂಹಾರಿ ಆದ ರವೀಂದ್ರ ಜಡೇಜಾ

ಮತ್ತೆ ಮತ್ತೆ ಬೂದಿಯಿಂದ ಎದ್ದು ಬಂದ ಯಾರನ್ನಾದರೂ ಹೋಲಿಕೆ ಮಾಡಲು ಹೊರಟರೆ ಭಾರತೀಯ ಕ್ರಿಕೆಟ್ ರಂಗದಲ್ಲಿ ಈಗ ಸಿಗುವ ಮೊದಲ ಹೆಸರು ಸರ್ ರವೀಂದ್ರ ಜಡೇಜಾ. ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತವು ಗೆಲ್ಲುವಲ್ಲಿ ಈ ಸವ್ಯಸಾಚಿ ಆಟಗಾರನ ಆಟವು ನಿರ್ಣಾಯಕ ಆದದ್ದು. ಬಲಿಷ್ಟ ಆಸ್ಟ್ರೇಲಿಯ ವಿರುದ್ಧದ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಬಾಲ್ ಮತ್ತು ಬ್ಯಾಟ್ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಿದ ಒಂದೇ ಹೆಸರು ಅದು ಸರ್ ರವೀಂದ್ರ ಜಡೇಜಾ.
ಅವರ ಸರ್ವಾಂಗೀಣ ಆಟದ ಮುಂದೆ ಆಸ್ಟ್ರೇಲಿಯದ ದೈತ್ಯ ಬಲಿಷ್ಠ ಆಟಗಾರರು ನತಮಸ್ತಕ ಆದದ್ದು ಭಾರತೀಯ ಕ್ರಿಕೆಟ್ ಭವಿಷ್ಯದ ಹೊಳೆಯುವ ದಿಕ್ಸೂಚಿ ಎಂದು ಖಂಡಿತ ಹೇಳಬಹುದು.

ಐದು ತಿಂಗಳು ಕ್ರಿಕೆಟ್ ವನವಾಸದ ನಂತರ ಸುನಾಮಿ ಆಟ





























 
 

ಸೆಪ್ಟೆಂಬರ್ 2022ರ ಹೊತ್ತಿಗೆ ಜಡ್ಡು ಮೊಣಗಂಟು ನೋವಿಗೆ ತುತ್ತಾಗಿದ್ದರು. ನೋವಿನಲ್ಲಿ ನಿದ್ದೆ ಬಾರದೆ ಒದ್ದಾಡಿದ್ದರು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಲೇ ಬೇಕು ಅಂದಾಗ ಜಡ್ಡು ಎಲ್ಲ ಭರವಸೆ ಕಳೆದುಕೊಂಡರು. ಪರಿಣಾಮವಾಗಿ ಐದು ತಿಂಗಳು ಕ್ರಿಕೆಟ್ ವನವಾಸ. ಈ ಮಧ್ಯೆ ಭಾರತ T20 ವಿಶ್ವಕಪ್ ಆಡಿತ್ತು. ಹಲವು ಸ್ಪರ್ಧಾತ್ಮಕ ಟೆಸ್ಟ್, ODI ಪಂದ್ಯಗಳು ನಡೆದವು. ಎಲ್ಲ ಕಾಮೆಂಟರಿ ಹೇಳುವವರು ಕೂಡ ಜಡ್ಡು ಟೀಮಲ್ಲಿ ಇರಬೇಕಿತ್ತು ಎನ್ನುತ್ತಿದ್ದರು. ಆಯ್ಕೆ ಮಂಡಳಿ ಅವರ ಜಾಗದಲ್ಲಿ ಯಾರ್ಯಾರನ್ನೋ ಫಿಟ್ ಮಾಡಿ ಅನೇಕ ಪ್ರಯೋಗಗಳನ್ನು ಮಾಡಿತು. ಆದರೆ ಯಾರೂ ನಮ್ಮ ಜಡ್ಡುಗೆ ಸಬ್‌ಸ್ಟಿಟ್ಯೂಟ್ ಆಗಿಲ್ಲ ಎನ್ನುವುದು ಜಡ್ಡು ಪ್ರತಿಭೆಗೆ ಸಾಕ್ಷಿ.
ಅತ್ಯಂತ ಪ್ರತಿಷ್ಠಿತವಾದ ಗವಾಸ್ಕರ್-ಬಾರ್ಡರ್ ಟ್ರೋಫಿಯ ಈ ದೊಡ್ಡ ಸರಣಿಯಲ್ಲಿ ಮರುಪ್ರವೇಶ ಮಾಡಿದ ಜಡ್ಡು ಭಾರತಕ್ಕೆ ಎರಡೂ ಟೆಸ್ಟ್ ಪಂದ್ಯಗಳನ್ನು ಬಹು ದೊಡ್ಡ ಮಾರ್ಜಿನ್‌ನಲ್ಲಿ ಗೆಲ್ಲಿಸಿಕೊಟ್ಟಿದ್ದಾರೆ. ಇದಕ್ಕಿಂತ ಉತ್ತಮವಾದ ಕಮ್ ಬ್ಯಾಕ್ ಯಾರೂ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ.

ಜಡ್ಡು ಎಂಬ ಫೈಟಿಂಗ್ ಸ್ಪಿರಿಟ್

ಗುಜರಾತನ ಜಾಮ್ ನಗರದಲ್ಲಿ ಒಬ್ಬ ಸೆಕ್ಯುರಿಟಿ ಗಾರ್ಡ್ ಮಗನಾಗಿ ಬಡತನದ ಕುಟುಂಬದಲ್ಲಿ ಜನಿಸಿದ ಜಡ್ಡು ಬಾಲ್ಯದಲ್ಲಿ ಕ್ರಿಕೆಟರ್ ಆಗುವ ಕನಸನ್ನೇ ಕಂಡವರು. ಆದರೆ ಅವರ ತಂದೆಗೆ ಮಗ ಆರ್ಮಿಯಲ್ಲಿ ಆಫೀಸರ್ ಆಗಬೇಕು ಎಂದು ಆಸೆ ಇತ್ತು. ಕೊನೆಗೆ ಮಗನ ಹಠವೇ ಗೆದ್ದಿತ್ತು. ಶಾಲೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಕ್ರಿಕೆಟ್ ಗ್ರೌಂಡಲ್ಲಿ ಬೆವರು ಹರಿಸಿದ ಜಡ್ಡು ಕೆಲವೇ ಕೆಲವು ವರ್ಷಗಳಲ್ಲಿ ಚಾಂಪಿಯನ್ ಆಟಗಾರ ಆಗಿ ರೂಪುಗೊಂಡರು. ಎಡಗೈ ಬಲಿಷ್ಠ ದಾಂಡಿಗ, ಎಡಗೈ ಆರ್ಥಾಡಾಕ್ಸ್ ಸ್ಪಿನ್ನರ್, ಅದರ ಜತೆಗೆ ಗ್ರೌಂಡಿನ ಯಾವ ಮೂಲೆಯಲ್ಲಿ ನಿಂತರೂ ಅತ್ಯುತ್ತಮ ಫೀಲ್ಡರ್ ಆಗಿರುವ ಜಡ್ಡು ದೇಹದಲ್ಲಿ ಹರಿಯುತ್ತಿರುವುದು ರಜಪೂತ ರಕ್ತ ಎನ್ನುವುದು ಮತ್ತೆ ಮತ್ತೆ ಪ್ರೂವ್ ಆಗಿದೆ. ಜಡ್ಡು ಇರುವಷ್ಟು ಹೊತ್ತು ಅವರ ತಂಡವನ್ನು ಸೋಲಲು ಬಿಡುವುದಿಲ್ಲ ಅನ್ನುವ ನಂಬಿಕೆ ಈವರೆಗೆ ಸುಳ್ಳು ಆದದ್ದೇ ಇಲ್ಲ. ಯಾವ ಪಿಚ್‌ನಲ್ಲಿಯೂ ವಿಕೆಟ್ ಕೇಳುವ ಶಕ್ತಿ ಜಡ್ಡುಗೆ ಇದೆ. ಅವರ ಫೈಟಿಂಗ್ ಸ್ಪಿರಿಟ್ ಎಂದಿಗೂ ಸೋಲನ್ನು ಸುಲಭದಲ್ಲಿ ಒಪ್ಪುವುದಿಲ್ಲ.

U19 ವಿಶ್ವಕಪ್ ವಿಜೇತ ತಂಡದ ವೈಸ್ ಕ್ಯಾಪ್ಚನ್ ಜಡ್ಡು!

2008ರ ಅಂಡರ್ 19 ವಿಶ್ವಕಪ್ ಭಾರತ ಗೆದ್ದಾಗ ಉಪನಾಯಕ ಆಗಿ ಇದ್ದವರು ರವೀಂದ್ರ ಜಡೇಜಾ. ಆಗ ಕ್ಯಾಪ್ಟನ್ ಆಗಿ ಇದ್ದವರು ವಿರಾಟ್ ಕೊಹ್ಲಿ. ಅಂದಿನಿಂದಲೂ ಅವರಿಬ್ಬರೂ ಉತ್ತಮ ಗೆಳೆಯರು.
ರವೀಂದ್ರ ಜಡೇಜಾ ಅವರ ಮೂರೂ ಫಾರ್ಮಾಟ್ ದಾಖಲೆಗಳು ಅತ್ಯಂತ ಆಕರ್ಷಕ ಆಗಿವೆ. ಯಾವ ಫಾರ್ಮಾಟ್‌ನಲ್ಲಿ ಕೂಡ ಜಡೇಜ ಅವರದ್ದು ಒಂದೇ ಮಂತ್ರ – ಅದು ಆಕ್ರಮಣ.
ಟೆಸ್ಟ್ ಕ್ರಿಕೆಟಿನಲ್ಲಿ 2500 ರನ್ ಸೂರೆ ಮತ್ತು 250 ವಿಕೆಟ್ ಪಡೆದ ಮತ್ತು ಆ ಸಾಧನೆಯನ್ನು ಕ್ಷಿಪ್ರವಾಗಿ ಮಾಡಿದ ಭಾರತೀಯ ಆಟಗಾರ ಆಗಿ ಜಡೇಜ ಈಗ ದಾಖಲೆಯ ಭಾಗವಾಗಿದ್ದಾರೆ. 60 ಟೆಸ್ಟ್ ಆಡಿರುವ ಅವರು 2593 ರನ್ ಪರ್ವತ ಏರಿದ್ದಾರೆ. 11 ಬಾರಿ ಟೆಸ್ಟ್ ಪಂದ್ಯಗಳಲ್ಲಿ ಐದು ವಿಕೆಟ್ ಗೊಂಚಲು ಮತ್ತು ಒಮ್ಮೆ 10 ವಿಕೆಟ್ ಗೊಂಚಲು ಪಡೆದಿದ್ದಾರೆ.
171 ಏಕದಿನದ ಪಂದ್ಯಗಳಲ್ಲಿ ಆಡಿರುವ ಜಡೇಜಾ ಒಟ್ಟು ಸ್ಕೋರ್ 2447. 189 ವಿಕೆಟ್ ಅವರ ಹೆಸರಲ್ಲಿ ಇವೆ.
ಐಪಿಎಲ್ ಪಂದ್ಯಗಳಲ್ಲಿ ಧೋನಿಯ ಅತ್ಯಂತ ವಿಶ್ವಾಸಪಾತ್ರ ಆಟಗಾರ ಆಗಿರುವ ಜಡ್ಡು ತನ್ನ ಕಪ್ತಾನನ ಭರವಸೆಯನ್ನು ಎಂದಿಗೂ ಹುಸಿ ಮಾಡಿಲ್ಲ. ಧೋನಿಯ ನಿವೃತ್ತಿಯ ನಂತರ ಚೆನ್ನೈ ತಂಡದ ಶಾಶ್ವತ ಕ್ಯಾಪ್ಚನ್ ಆಗಿ ಜಡ್ಡು ಮೂಡಿ ಬರುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ.

ದಾಖಲೆಗಳು, ದಾಖಲೆಗಳು ಮತ್ತು ದಾಖಲೆಗಳು

ರವೀಂದ್ರ ಜಡೇಜಾ ಯಾವತ್ತೂ ದಾಖಲೆಗಳ ಮೇಲೆ ಕಣ್ಣಿಟ್ಟು ಆಡಿದವರು ಅಲ್ಲ. ಆದರೆ ಅವರು ಚೆನ್ನಾಗಿ ಆಡಿರುವ ಎಲ್ಲ ಪಂದ್ಯಗಳಲ್ಲಿಯೂ ಅವರ ತಂಡ ಗೆದ್ದಿದೆ ಅನ್ನುವುದು ಒಂದು ವಿಶಿಷ್ಟ ದಾಖಲೆ.
2012ರ ಒಂದೇ ವರ್ಷದ ಅವಧಿಯಲ್ಲಿ ಪ್ರಥಮ ದರ್ಜೆ ಪಂದ್ಯದಲ್ಲಿ ಮೂರು ತ್ರಿಶತಕ ಹೊಡೆದು ಬ್ರಾಡ್ಮನ್ ಅಂತವರ ಸಾಲಿಗೆ ಜಡೇಜ ಸೇರಿದ್ದಾರೆ. ಆಗ ಅವರ ವಯಸ್ಸು 23 ಮಾತ್ರ ಆಗಿತ್ತು ಅನ್ನುವುದು ಕೂಡ ದಾಖಲೆ.
2017ರಲ್ಲಿ ವಿಶ್ವಮಟ್ಟದ ನಂಬರ್ ಒನ್ ಟೆಸ್ಟ್ ಬೌಲರ್ ರ್ಯಾಂಕ್ ಕೂಡ ಜಡ್ಡು ಪಡೆದಿದ್ದರು. ನಂತರ ರವಿಚಂದ್ರನ್ ಆಶ್ವಿನ್ ಸತತವಾಗಿ ಆ ಸ್ಥಾನವನ್ನು ತುಂಬಿದರು. ಅವರಿಬ್ಬರ ಕಾಂಬಿನೇಶನ್ ಟೆಸ್ಟ್ ಕ್ರಿಕೆಟಿನ ಅತ್ಯಂತ ಡೆಡ್ಲಿ ಕಾಂಬಿನೇಶನ್ ಎಂದು ಈಗಾಗಲೇ ಸಾಬೀತಾಗಿದೆ.
ಈಗಾಗಲೇ 34 ವರ್ಷ ದಾಟಿರುವ ಜಡ್ಡು ಅವರ ಪ್ರತಿಭೆಯನ್ನು ಭಾರತೀಯ ಕ್ರಿಕೆಟ್ ಆಯ್ಕೆಗಾರರು ಮೂರೂ ಫಾರ್ಮಾಟ್‌ಗಳಲ್ಲಿ ಚಂದವಾಗಿ ಉಪಯೋಗ ಮಾಡಲಿ ಎನ್ನುವುದೇ ಆಶಯ
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top