ಪುತ್ತೂರು: ರಾಜಕೀಯವಾಗಿ ನಾವು ಸ್ವತಂತ್ರರಾಗಿದ್ದೇವೆ. ಆದರೆ ಧಾರ್ಮಿಕವಾಗಿಯೂ ನಾವು ಸ್ವತಂತ್ರರಾಗಬೇಕು. ತನ್ಮೂಲಕ ವಿದ್ಯಾರ್ಥಿಗಳು ರಾಷ್ಟ್ರವನ್ನು ಕಟ್ಟಬೇಕು. ಪ್ರತಿಯೊಬ್ಬರೂ ಸ್ವಾಭಿಮಾನಿಗಳಾಗಿ ಭಾರತದ ಬದಲಾವಣೆಗೆ ಮೇಲ್ಪಂಕ್ತಿಯನ್ನು ಹಾಕಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ‘ಸೌಪ್ರಸ್ಥಾನಿಕ’ ಎಂಬ ವಿದಾಯ ಕೂಟದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ ಪಠ್ಯಪುಸ್ತಕದಿಂದ ಕಲಿಯುವ ವಿಷಯ ಕೇವಲ ಒಂದು ಶೇಕಡದಷ್ಟು ಮಾತ್ರ. ಅದಕ್ಕಿಂತ ದುಪ್ಪಟ್ಟನ್ನು, ಜೀವನ ಪಾಠವನ್ನು ಸಮಾಜವು ನಮಗೆ ಕಲಿಸುತ್ತದೆ. ಶಿಕ್ಷಣವು ಕೃಷಿ ಇದ್ದಂತೆ. ಅದನ್ನ ನಾವು ಹಂತ ಹಂತವಾಗಿ ಕಲಿಯುತ್ತಾ ಹೋಗುತ್ತೇವೆ. ಮುಖ್ಯವಾಗಿ ನಾವು ಓದುವ ವಿಷಯದಲ್ಲಿ ಪ್ರಮಾಣದ ಜೊತೆ ಜೊತೆಗೆ ಗುಣಮಟ್ಟ ಎಂಬುವುದು ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟರು.
ನಮ್ಮ ದೇಹ ಅಕ್ಷಯಪಾತ್ರೆ ಇದ್ದಂತೆ. ಅದನ್ನು ನಾವು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಭಿಕ್ಷಾ ಪಾತ್ರೆ ಇಟ್ಟುಕೊಂಡು ಭಿಕ್ಷುಕ ಭಿಕ್ಷೆ ಬೇಡಿದಂತಾಗುತ್ತದೆ. ನಾವು ಮನಸ್ಸಿನ ಮುಖಾಂತರ ಅಂಗಾಂಗಗಳಿಗೆ ಆದೇಶವನ್ನು ನೀಡಬೇಕು ಎಂದರಲ್ಲದೆ ಸಂಪಾದಿಸಿದ್ದನ್ನು ಸಮಾಜ ಸೇವೆಯಲ್ಲಿ ವಿನಿಯೋಗಿಸಬೇಕು. ಜೀವನದಲ್ಲಿ ನಮಗೆ ಪರಮ ಶಾಂತಿಯೇ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಭಟ್, ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಖುಷಿ ಸ್ವಾಗತಿಸಿ, ಭಾರ್ಗವಿ ವಂದಿಸಿದರು. ಅರುಂಧತಿ ಹಾಗೂ ತನ್ವಿ ಕಾರ್ಯಕ್ರಮ ನಿರೂಪಿಸಿದರು.