ಪುತ್ತೂರು : ದಕ್ಷಿಣ ಕಾಶಿ ಎಂದು ಕರೆಯುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಒಂದನೇ ಮಖೆಕೂಟದ ಅಂಗವಾಗಿ ನೇತ್ರಾವತಿ ನದಿಯಲ್ಲಿರುವ ಉದ್ಭವ ಲಿಂಗದ ಬಳಿ ಸ್ವಯಂ ಲಿಂಗಾಭಿಷೇಕ ಸೇವೆ ಶನಿವಾರ ನಡೆಯಿತು.
ಬೆಳಿಗ್ಗೆಯಿಂದಲೇ ಊರ-ಪರವೂರಿನಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಉದ್ವವ ಲಿಂಗಕ್ಕೆ ಎಕ್ಕದ ಹೂ ಸಹಿತ ವಿವಿಧ ಹೂವುಗಳಿಂದ ಹಲವು ಬಗೆಯ ಅಲಂಕಾರ ಮಾಡಿ ತಮ್ಮಕೈಯಾರೆ ಜಲಾಭಿಷೇಕ, ಕ್ಷೀರಾಭಿಷೇಕ, ಸೀಯಾಳಾಭಿಷೇಕ ಸಮರ್ಪಿಸಿದರು.
ಶನಿವಾರ ಆರಂಭಗೊಂಡ ಅಖಂಡ ಭಜನಾ ಸೇವೆ ಭಾನುವಾರ ಸೂರ್ಯೋದಯದ ತನಕ ನಡೆಯಿತು. ಸಂಜೆ ಉದ್ಭವ ಲಿಂಗದ ಬಳಿ ಅರ್ಘ್ಯ, ಶಿವಪೂಜೆ ನಡೆಯಿತು. ರಾತ್ರಿ ರುದ್ರಪಾರಾಯಣ, ದೇವಸ್ಥಾನದಲ್ಲಿ ಬಲಿ ಹೊರಟು ಉತ್ಸವ, ಮಹಾಪೂಜೆ ನಡೆಯಿತು. ಭಾನುವಾರ ಪ್ರಾತಃಕಾಲದಲ್ಲಿ ಸಂಗಮ ಕ್ಷೇತ್ರದಲ್ಲಿ ತೀರ್ಥ ಸ್ನಾನ ನಡೆಯಿತು. ಬಳಿಕ ಶ್ರೀದೇವರ ಬಲಿ ಹೊರಟು ರಥೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ರಾತ್ರಿ ಪುತ್ತೂರು ಯಕ್ಷಶ್ರೀ ಹವ್ಯಾಸಿ ಬಳಗದಿಂದ ಯಕ್ಷಗಾನ ತಾಳಮದ್ದಳೆ, ಗೋಕುಲನಗರ ಯಕ್ಷನಂದನ ಕಲಾ ಸಂಘದವರಿಂದ ತ್ರಿಪುರ ಮಥನ ಯಕ್ಷಗಾನ ಬಯಲಾಟ ಜರಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಹರೀಶ್ ಉಪಾಧ್ಯಾಯ, ಹರಿಣಿ ಕೆ., ಪ್ರೇಮಲತಾ, ರಾಮ ನಾಯ್ಕ, ಹರಿರಾಮಚಂದ್ರ, ಸುನೀಲ್ ಎ., ಮಹೇಶ್ ಜಿ., ಜಯಂತ ಪುರೋಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.