ಪುತ್ತೂರು : ಮೇ ತಿಂಗಳಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕದಳದವರನ್ನು ನೇಮಿಸಬೇಕಾದ ಹಿನ್ನಲೆಯಲ್ಲಿ ದ.ಕ.ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ, ಪೌರರಕ್ಷಣಾ ಪಡೆಯ ಮುಖ್ಯಪಾಲಕ ಡಾ.ಮುರಲೀ ಮೋಹನ್ ಚೂಂತಾರು ಪುತ್ತೂರಿನ ಗೃಹರಕ್ಷಕದಳ ಘಟಕದ ಕಚೇರಿಗೆ ಭಾನುವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ನಿಷ್ಕ್ರೀಯ ಗೃಹರಕ್ಷಕರನ್ನು ತೆಗೆದುಹಾಕಿ ಕ್ರಿಯಾಶೀಲ ಗೃಹರಕ್ಷಕರನ್ನು ನೇಮಕ ಮಾಡುವಂತೆ ಘಟಕಾಧಿಕಾರಿ ಅಭಿಮನ್ಯು ರೈಯವರಿಗೆ ಸೂಚನೆ ನೀಡಿದರು. ಎಲ್ಲಾ ಗೃಹರಕ್ಷಕರು ತಮ್ಮ ಸದಸ್ಯತ್ವ ನವೀಕರಣಗೊಳಿಸಿ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ಚುನಾವಣೆಗೆ ತಯಾರಾಗುವಂತೆ ಸೂಚನೆ ನೀಡಿದರು.

ಪದೇ ಪದೇ ಕಾರಣವಿಲ್ಲದೆ ವಾರದ ಕವಾಯಿತಿಗೆ ಗೈರು ಹಾಜರಾಗುವ ಮತ್ತು ಬಂದೋಬಸ್ತ್ ಕರ್ತವ್ಯಗಳಿಗೆ ಹಾಜರಾಗದೇ ಇರುವ ಗೃಹರಕ್ಷಕದ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಅವರು, ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಗೆ ಎಲ್ಲಾ ಗೃಹರಕ್ಷಕರನ್ನು ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಗೃಹರಕ್ಷಕರಾದ ಜಗನ್ನಾಥ್, ಸುದರ್ಶನ್ ಜೈನ್, ವಿಠಲ್ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.