ಪುತ್ತೂರು: ಗೌಡ ಸಮುದಾಯ ಹಿಂದೂ ಸಮಾಜದ ಒಂದು ಕೊಂಬೆ. ಮರಕ್ಕೆ ಎಲ್ಲಿಯೂ ತೊಂದರೆ ಆಗದಂತೆ, ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವವನ್ನು ಗೌಡ ಸಮುದಾಯದ ಸಮಾವೇಶದಂತೆ ಮಾಡಿರುವುದು ಉತ್ತಮ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ಫೆ. 19ರಂದು ನಡೆದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಕಾರ್ಯಕ್ರಮದ ಕೃತಜ್ಞತೆ ಸಭೆಯಲ್ಲಿ ಅವರು ಮಾತನಾಡಿದರು.
ಒಂದು ದೇವಸ್ಥಾನಕ್ಕೆ ಹರಿದು ಬಂದಂತೆ ಹೊರೆಕಾಣಿಕೆ ಬಂದದ್ದು ವಿಶೇಷವಾಗಿ ಕಂಡಿತು ಎಂದ ಅವರು, ಮೆರವಣಿಗೆ, ಸಭಾ ವೇದಿಕೆ, ಸಭಾಂಗಣ ಸೇರಿದಂತೆ ಎಲ್ಲಾ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಅಲಂಕಾರಕ್ಕೂ ಹಿಂದೂ ಸಮಾಜದ ಧ್ವಜವಾದ ಕೇಸರಿಯನ್ನೇ ಹಾಕಿ, ಸಮಾಜದಲ್ಲಿ ಒಗ್ಗಟ್ಟಿನ ಸಂಕೇತವನ್ನು ತೋರಿಸಿರುವುದು ಹೆಚ್ಚು ಅರ್ಥಪೂರ್ಣವಾಗಿತ್ತು. ಒಟ್ಟಿನಲ್ಲಿ ಕಾರ್ಯಕ್ರಮ ಹಿಂದೂ ಸಮಾಜ ಹೆಮ್ಮೆ ಪಡುವಂತೆ ಮೂಡಿಬಂದಿತು ಎಂದು ಅಭಿಪ್ರಾಯಪಟ್ಟರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಗೌಡ ಸಮುದಾಯಕ್ಕೆ ಪ್ರತ್ಯೇಕ ಧ್ವಜವಿದೆ. ಹಾಗಿದ್ದು, ಸಮಾವೇಶದಲ್ಲಿ ಎಲ್ಲಿಯೂ ಗೌಡ ಸಮುದಾಯದ ಧ್ವಜವನ್ನು ಬಳಸಿಕೊಂಡಿಲ್ಲ. ಹಿಂದೂ ಸಮಾಜದ ಧ್ವಜವನ್ನೇ ಬಳಸಿಕೊಂಡು, ಗೌಡ ಸಮುದಾಯ ಹಿಂದೂ ಸಮಾಜದ ಪ್ರಮುಖ ಭಾಗ ಎನ್ನುವ ಸಂದೇಶವನ್ನು ನೀಡಿದಂತಾಗಿದೆ. ಒಟ್ಟಿನಲ್ಲಿ ಗೌಡ ಸಮುದಾಯದ ಸಮಾವೇಶ, ಹಿಂದೂ ಸಮಾವೇಶದಂತೆ ಮೂಡಿಬಂದಿದ್ದು, ಅರ್ಥಪೂರ್ಣವಾಗಿತ್ತು ಎಂದು ಹೇಳಿದರು.
ಇದೇ ಸಂದರ್ಭ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸಿದ ವಿವಿಧ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರನ್ನು ಗೌರವಿಸಲಾಯಿತು. ಜಯಂತ್ಯೋತ್ಸವ ಪೂರ್ವ ತಯಾರಿ ಮತ್ತು ಜಯಂತ್ಯೋತ್ಸವ ಕಾರ್ಯಕ್ರಮವನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಜಯಂತ್ಯೋತ್ಸವ ಸಂಸ್ಮರಣಾ ಸಮಿತಿ ಜಿಲ್ಲಾ ಆರ್ಥಿಕ ಸಮಿತಿ ಸಂಚಾಲಕರಾದ ಉಮೇಶ್, ಯು.ಪಿ ರಾಮಕೃಷ್ಣ, ಸಂಸ್ಮರಣಾ ಸಮಿತಿ ಜಿಲ್ಲಾ ಸಂಚಾಲಕ ಚಿದಾನಂದ ಬೈಲಾಡಿ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರು ಮತ್ತು ಸಂಸ್ಮರಣಾ ಸಮಿತಿ ಕಾರ್ಯದರ್ಶಿ ನಾಗೇಶ್ ಗೌಡ ಕೆಡೆಂಜಿ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ. ಗೌಡ, ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಗೌರಿ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು. ಸಂಸ್ಮರಣಾ ಸಮಿತಿ ತಾಲೂಕು ಸಂಚಾಲಕ ದಿನೇಶ್ ಮೆದು ಸ್ವಾಗತಿಸಿದರು. ದಾಮೋದರ್ ನಂದಿಲ ಕಾರ್ಯಕ್ರಮ ನಿರೂಪಿಸಿದರು.