ಉದ್ಧವ್ ಠಾಕ್ರೆಗೆ ತೀವ್ರ ಮುಖಭಂಗ
ಹೊಸದಿಲ್ಲಿ : ಶಿವಸೇನೆಯ ಚುನಾವಣಾ ಚಿಹ್ನೆಯಾದ ಬಿಲ್ಲು ಮತ್ತು ಬಾಣೌನ್ನು ಚುನಾವಣಾ ಆಯೋಗ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ನೀಡುವುದರೊಂದಿಗೆ ಪಕ್ಷದ ಸ್ಥಾಪಕ ಬಾಳಾ ಠಾಕ್ರೆಯವರ ಪುತ್ರ, ಮಾಜಿ ಮುಖ್ಯಮಂತ್ರಿ ಉದ್ಧವ ಟಾಕ್ರೆ ಬಣ ತೀವ್ರ ಮುಖಭಂಗ ಅನುಭವಿಸಿದೆ. ಶಿವಸೇನೆ ವರ್ಸಸ್ ಶಿವಸೇನೆ ನಡುವಿನ ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಗೆಲುವು ಸಿಕ್ಕಿದೆ.
ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ ಬಿಲ್ಲುಬಾಣವನ್ನು ಶಿಂಧೆ ಬಣಕ್ಕೆ ನೀಡುವ ಮೂಲಕ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿದೆ.
ತಮ್ಮ ಬಣವೇ ನಿಜವಾದ ಶಿವಸೇನಾ ಎಂದು ಪರಿಗಣಿಸಿ ಪಕ್ಷದ ಚುನಾವಣಾ ಚಿಹ್ನೆಯನ್ನು ನೀಡುವಂತೆ ಏಕನಾಥ ಶಿಂಧೆ ಬಣ ಹಾಗೂ ಉದ್ಧವ್ ಠಾಕ್ರೆ ಬಣ ಚುನಾವಣಾ ಆಯೋಗದ ಮೊರೆ ಹೋಗಿದ್ದವು. ಆಯೋಗ ಅಂತಿಮವಾಗಿ ಬಿಲ್ಲು ಬಾಣ’ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿದೆ.
ಪ್ರಜಾಪ್ರಭುತ್ವದ ಕಗ್ಗೊಲೆ- ರಾವತ್
ಚುನಾವಣಾ ಆಯೋಗದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷದ ನಾಯಕ ಸಂಜಯ್ ರಾವತ್ ಅವರು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಟೀಕಿಸಿದ್ದಾರೆ.
ನಮ್ಮ ಪಕ್ಷ ಜನರ ಬಳಿಗೆ ಹೋಗಲಿದೆ. ಚುನಾವಣಾ ಆಯೋಗದ ಈ ನಿರ್ಧಾರ ನಿರೀಕ್ಷಿತ ಮತ್ತು ಆಯೋಗದ ಮೇಲೆ ನಂಬಿಕೆ ಇರಲಿಲ್ಲ ಎಂದು ರಾವತ್ ಹೇಳಿದ್ದಾರೆ.