ಪುತ್ತೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷರಂಗದ ಅಭಿಮನ್ಯು ಕೀರ್ತಿಶೇಷ ಸ್ವರ್ಗೀಯ ಪುತ್ತೂರು ಡಾ.ಶ್ರೀಧರ ಭಂಡಾರಿ ಸಂಸ್ಮರಣಾ ಕಾರ್ಯಕ್ರಮ “ಡಾ.ಶ್ರೀಧರ ಭಂಡಾರಿ “ಯಕ್ಷದೇಗುಲ” ಪ್ರಶಸ್ತಿ ಪ್ರದಾನ ಸಮಾರಂಭ ಫೆ.19 ಭಾನುವಾರ ಸಂಜೆ 5 ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿದೆ.
ಕಾಸರಗೋಡು ಶ್ರೀ ಎಡನೀರು ಮಠದ ಜಗದ್ಗುರು ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಖ್ಯಾತ ಯಕ್ಷಗಾನ ಭಾಗವತ ಸತೀಶ ಪಟ್ಲ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಆಶಾ ವಾಮನ್ ಕುಮಾರ್ ಯಕ್ಷರಕ್ಷ ನಿಧಿ ಸಮರ್ಪಣೆ ಮಾಡುವರು.
ಈ ಸಂದರ್ಭದಲ್ಲಿ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಅವರಿಂದ ಭಕ್ತಿಪ್ರಧಾನ ಯಕ್ಷಗಾನ ಬಯಲಾಟ “ಶ್ರೀ ದೇವಿ ಮಹಾತ್ಮೆ” ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.