ಪುತ್ತೂರು: ಶಾಂತಿಗೋಡು ಗ್ರಾಮದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಫೆ.15ರಿಂದ ಫೆ.17ರ ತನಕ ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ವೀರಮಂಗಲ ಕ್ಷೇತ್ರವು ಪ್ರಾಚೀನ ಕಾಲದಲ್ಲಿ ನಿತ್ಯಮಂಗಲ ಎಂಬ ಹೆಸರನ್ನು ಪಡೆದಿತ್ತು. ತದನಂತರ ಬಲ್ಲಾಳ ಮನೆತನದ ವೀರಮ್ಮ ಬಳ್ಳಾಲ್ತಿಯ ಶೌರ್ಯದ ಪ್ರತೀಕವಾಗಿ ವೀರಮಂಗಲವಾಯಿತೆಂಬ ಇತಿಹಾಸವಿದೆ. ಈ ಊರಿನ ಭಕ್ತರ ಪ್ರತೀಕವಾಗಿ ಪುಣ್ಯವಾಹಿನಿ ಕುಮಾರಧಾರ ನದಿ ತಟದಲ್ಲಿ ಕಂಗೊಳಿಸುವ ಪವಿತ್ರ ಕ್ಷೇತ್ರವಾಗಿದೆ. ಪುತ್ತೂರು ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನಕ್ಕೆ ತೆರಳುವ ಸಂದರ್ಭ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವರನ್ನು ಭೇಟಿಯಾಗಿ ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನ ನಡೆಸುವುದು ಇಲ್ಲಿನ ಪುರಾತನ ಸಂಪ್ರದಾಯವಾಗಿದೆ. ಹರಿಹರರು ಒಂದಾಗಿ ಭಕ್ತರನ್ನು ಹರಸುವ ಈ ಪುಣ್ಯಕ್ಷೇತ್ರ ವೀರಮಂಗಲದ ಪುಣ್ಯಭೂಮಿಯಾಗಿದೆ.
ಜಾತ್ರೋತ್ಸವದಲ್ಲಿ ಫೆ.15ರಂದು ರಾತ್ರಿ ದೇವರಿಗೆ ರಂಗಪೂಜೆ ನಡೆಯಲಿದೆ. ಫೆ.16 ರಂದು ಪೂರ್ವಾಹ್ನ ಗಣಹೋಮ, ಸೀಯಾಳಾಭಿಷೇಕ, ಪವಮಾನಾಭಿಷೇಕ, ನವಕ ಕಲಶಾಭಿಷೇಕ, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ ದೈವಗಳ ಭಂಡಾರ ತೆಗೆಯುವುದು, ಬಳಿಕ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ರಾತ್ರಿ ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, ಉಳ್ಳಾಕುಲು, ಹುಲಿಭೂತ, ಕೊಡಮಣಿತ್ತಾಯ, ಅಂಬಣ ಪಂಜುರ್ಲಿ ದೈವಗಳ ನೇಮ ನಡೆಯಲಿದೆ. ಫೆ.17ರಂದು ಬೆಳಿಗ್ಗೆ ಶ್ರೀರಕೇಶ್ವರಿ, ಶಿರಾಡಿ ರಾಜನ್ ದೈವ, ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.
ಫೆ.24 ದೊಂಪದ ಬಲಿ:
ಫೆ.23ರಂದು ರಾತ್ರಿ ಭಂಡಾರ ತೆಗೆದು ಫೆ.24ರಂದು ಬೆಳಿಗ್ಗೆ ವೀರಮಂಗಲ ಶ್ರೀ ಶಿರಾಡಿ ರಾಜನ್ ದೈವದ ದೊಂಪದ ಬಲಿ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವರಾಮ ಭಟ್ ಬಾವ, ವಿಶ್ವಸ್ಥ ಮಂಡಳಿ ಅಧ್ಯಕ್ಷ ಉಮೇಶ್ ಕೋಡಿಬೈಲು ಹಾಗೂ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯ ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.