ಪುತ್ತೂರು: ಬೆಟ್ಟಂಪಾಡಿ ಮಂಡಲದ ನಿಡ್ಪಳ್ಳಿಯ ಸಕ್ರೀಯ ಬಿಜೆಪಿ ಕಾರ್ಯಕರ್ತ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುರಳೀಕೃಷ್ಣ ಭಟ್ ಮುಂಡೂರು ಅವರ ಮೃತದೇಹದ ಅಂತಿಮಯಾತ್ರೆ ಹಾಗೂ ಅಂತಿಮ ದರ್ಶನ ಬುಧವಾರ ಮಧ್ಯಾಹ್ನ ನಡೆಯಿತು.


ವಾಹನದ ಮೂಲಕ ಸಾಗಿಬಂದ ಅಂತಿಮ ಯಾತ್ರೆಯಲ್ಲಿ ಹಲವಾರು ಮಂದಿ ಜೊತೆಗೂಡಿದರು. ಬಳಿಕ ಅಂತಿಮ ದರ್ಶನವನ್ನು ವೀಕ್ಷಿಸಿದ ಮಂದಿಯ ಕಣ್ಣಾಲಿಗಳು ತುಂಬಿ ಬಂದವು. ಸಂಟ್ಯಾರಿನ ಬಳಕ್ಕದಲ್ಲಿ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಮುರಳೀಕೃಷ್ಣ ಭಟ್ ಅವರು ಕೊನೆಯುಸಿರೆಳೆದಿದ್ದರು.
ಮುರಳೀಕೃಷ್ಣ ಭಟ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಭಾವನಾತ್ಮಕ ಸಂದೇಶಗಳು ಹರಿದಾಡುತ್ತಿವೆ. ಒಂದು ರೀತಿಯಲ್ಲಿ ಅಕ್ಷರದ ನುಡಿನಮನವನ್ನು ಮುರಳೀಕೃಷ್ಣ ಭಟ್ ಅವರ ಆತ್ಮೀಯರು, ಹಿತೈಷಿಗಳು ನೀಡಿದ್ದಾರೆ ಎಂದೇ ಹೇಳಬಹುದು.
ಒಂದು ಸಂದೇಶ ಹೀಗಿದೆ – “ಸಂಘದ ನಿಷ್ಠಾವಂತ ಕಾರ್ಯಕರ್ತನಾಗಿ, ಸಂಘಟನೆಯಲ್ಲಿ ಅನನ್ಯ ಜವಾಬ್ದಾರಿಯನ್ನು ವಹಿಸಿಕೊಂಡು ಸಮಾಜಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ, ಆ ಭಾಗದ ಹಲವಾರು ಯುವಕರ ಮಿತ್ರನಾಗಿ, ಕುಳ್ಳಗಿನ ಸಾಧಾರಣ ವ್ಯಕ್ತಿ ಮುರಳಿ ಅಣ್ಣ ದೇವರ ಪಾದ ಸೇರಿದ್ದಾರೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ”. ಎಂದು ಅಕ್ಷರಗಳಲ್ಲಿ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
“ಬಜರಂಗದಳದ ಮಾಜಿ ಸಂಯೋಜಕರಾಗಿ, ವಿಶ್ವ ಹಿಂದೂ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿ ನಂತರ ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯನಾಗಿ, ನಿಡ್ಪಲ್ಲಿ ಬೂತ್ ಅಧ್ಯಕ್ಷರಾಗಿ ಜನರ ಹೃದಯ ಸಾಮ್ರಾಟನಾಗಿದ್ದರು. ಸಂಘದ, ಪಕ್ಷದ, ಸಂಘಟನೆಯ ಯಾವುದೇ ಚಟುವಟಿಕೆಯಲ್ಲೂ ಮುಂಚೂಣಿಯಲ್ಲಿ ಕಾಣಿಸುತ್ತಿದ್ದ ಯುವ ನೇತಾರ ಮುರಳಿ ಅಣ್ಣ. ನಿಡ್ಪಳ್ಳಿ ಭಾಗದ ಸಂಘಟನೆಯ ಯಾವುದೇ ಚಟುವಟಿಕೆ ಆಗಲಿ ಒಂದು ಕ್ಷಣ ಯೋಚಿಸದೆ ಸಂಪೂರ್ಣ ಸಹಕಾರ ನೀಡುತ್ತಿದ್ದ ವ್ಯಕ್ತಿ. ಆ ಭಾಗದ ಭವಿಷ್ಯದ ನಾಯಕನಾಗಿ ಬೆಳೆಯುತ್ತಿದ್ದ ನಮ್ಮ ಮುರಳಿ ಅಣ್ಣನನ್ನು ಹಿಂದೂ ಸಮಾಜ ಕಳೆದುಕೊಂಡಿದೆ” ಎಂದು ನೋವು ತೋಡಿಕೊಂಡಿದ್ದಾರೆ.
ಅಂತಿಮ ದರ್ಶನದ ವೇಳೆ ಬಿಜೆಪಿಯ ಹಿರಿಯ ನಾಯಕರು ಜೊತೆಯಾಗಿದ್ದರು. ಬಿಜೆಪಿಯ ಸಕ್ರೀಯ ಕಾರ್ಯಕರ್ತನೋರ್ವನನ್ನು ಕಳೆದುಕೊಂಡು ನೋವು ಅವರಲ್ಲಿತ್ತು. ಭವಿಷ್ಯದ ಓರ್ವ ಮುಖಂಡ, ತನ್ನ ಇಳಿಹರೆಯದಲ್ಲೇ ಗತನಾದದ್ದು, ಎಲ್ಲರ ಕಣ್ಣಾಲಿಗಳು ತುಂಬಿಬರುವಂತೆ ಮಾಡಿದ್ದವು.
ಸ್ವಗೃಹಕ್ಕೆ ಮೃತದೇಹ:
ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದ್ವಾರದ ಬಳಿಯಿಂದ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ನಿಡ್ಪಳ್ಳಿ ವಿಜಯನಗರದಲ್ಲಿ ಅಂತಿಮ ದರ್ಶನ ಮಾಡಿ, ಬಳಿಕ ಮುಂಡೂರಿನ ಸ್ವಗೃಹಕ್ಕೆ ಮೃತದೇಹವನ್ನು ಕೊಂಡೊಯ್ಯಲಾಯಿತು.
ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಹಿಂದು ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರ. ಕಾರ್ಯದರ್ಶಿ ನಿತೀಶ್ ಶಾಂತಿವನ, ನಗರ ಅಧ್ಯಕ್ಷ ಪಿ.ಜಿ. ಜಗನ್ನೀವಾಸ್ ರಾವ್, ತಾ.ಪಂ. ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್, ಸದಸ್ಯರು, ಪ್ರಮುಖರಾದ ಪದ್ಮನಾಭ ಬೋರ್ಕರ್, ಹರೀಶ್ ಬಿಜತ್ರೆ, ಆರ್.ಸಿ. ನಾರಾಯಣ್ ಮೊದಲಾದವರು ಅಂತಿಮ ದರ್ಶನ ಪಡೆದರು.