ಅಡಿಕೆಯ ಕನಿಷ್ಠ ಆಮದು ದರ ಹೆಚ್ಚಿಸಿದ ಕೇಂದ್ರ: ಕ್ಯಾಂಪ್ಕೊ ಶ್ಲಾಘನೆ

ಪುತ್ತೂರು: ಅಡಿಕೆಯ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕೇಂದ್ರ ಸರಕಾರ ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ಕೆಜಿಗೆ 251 ರೂ.ನಿಂದ 351 ರೂ.ಗೆ ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಕೇಂದ್ರ ಸರಕಾರದ ಕ್ರಮಕ್ಕೆ ಅಡಿಕೆ ಬೆಳೆಗಾರರ ಹಿತರಕ್ಷಕ ಕ್ಯಾಂಪ್ಕೋ ಸಂಸ್ಥೆಯ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.

ಕೆಲವು ತಿಂಗಳುಗಳಿಂದ ಏರಿಳಿತದ ಮೂಲಕ ಮಾರುಕಟ್ಟೆಯಲ್ಲಿ ಅಡಿಕೆಯ ದರ ಅನಿಶ್ಚಿತತೆಯಿಂದ ಕೂಡಿತ್ತು. ಇದರಿಂದ ರೈತರಲ್ಲಿ ಹತಾಶೆಯ ಭಾವನೆ ಮೂಡಿಸಿತ್ತು. ಕೇಂದ್ರದ ಕ್ರಮದಿಂದಾಗಿ ಕಳಪೆ ಗುಣಮಟ್ಟದ ವಿದೇಶಿ ಅಡಿಕೆಯ ಆಮದಿನ ಮೇಲೆ ಭಾರಿ ಹೊಡೆತ ಬೀಳಲಿದ್ದು, ಉತ್ತಮ ಗುಣಮಟ್ಟದ ದೇಶೀ ಅಡಿಕೆಗೆ ಬೇಡಿಕೆ ಬರಲಿದೆ ಮತ್ತು ದರದಲ್ಲಿ ಸ್ಥಿರತೆ ಕಾಣಲಿದ್ದು, ಅಡಿಕೆ ಮಾರುಕಟ್ಟೆ ಚೇತರಿಕೆ ಆಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಕ್ಯಾಂಪ್ಕೊ, ಮ್ಯಾಮ್ಕೊಸ್, ಟಿಎಸ್ಎಸ್, ತುಮ್ಕೋಸ್, ಅಡಿಕೆ ಮಾರಾಟ ಮಹಾಮಂಡಳಿ ಮತ್ತು ಸಹಕಾರಿ ರಂಗದ ಹಿರಿಯರಾದ ಮಂಜಪ್ಪ ಹೊಸಬಾಳೆ ಹಾಗೂ ಸಹಕಾರ ಭಾರತೀಯ ರಾಷ್ಟ್ರೀಯ ನಾಯಕ ರಮೇಶ್ ವೈದ್ಯ ಮುಂತಾದ ಸದಸ್ಯರನ್ನೊಳಗೊಂಡ ನಿಯೋಗವು ದೆಹಲಿಗೆ ತೆರಳಿ ಆಮದು ಕನಿಷ್ಠ ಬೆಲೆಯನ್ನು ಹೆಚ್ಚಿಸುವಂತೆ ಕೃಷಿ ಮತ್ತು ವಾಣಿಜ್ಯ ಸಚಿವರಲ್ಲಿ ಮನವಿಯನ್ನು ಮಾಡಿತ್ತು. ನಂತರದ ದಿನಗಳಲ್ಲಿ ಕ್ಯಾಂಪ್ಕೊದ ನಿರಂತರ ಸಂಪರ್ಕ ಮತ್ತು ಒತ್ತಡದ ಪರಿಣಾಮ ಕೇಂದ್ರ ಸರಕಾರ ಸ್ಪಂದಿಸಿ, ಆದೇಶ ಹೊರಡಿಸಿದೆ. ಕನಿಷ್ಠ ಆಮದು ಬೆಲೆಯನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭ ಕರಂದ್ಲಾಜೆಯವರು ಪುತ್ತೂರಿನಲ್ಲಿ ಕ್ಯಾಂಪ್ಕೊದ  5ನೇ ಕೃಷಿ ಯಂತ್ರ ಮೇಳ ಉದ್ಘಾಟನಾ ಸಮಾರಂಭದಲ್ಲಿ ಘೋಷಣೆ ಮಾಡಿರುತ್ತಾರೆ. ಈಗ ತನ್ನ ಮಾತಿನಂತೆ ಕ್ರಮ ಕೈಗೊಂಡಿದ್ದಾರೆ ಎಂದು ಕ್ಯಾಂಪ್ಕೋ ತಿಳಿಸಿದೆ.































 
 

ಅಡಿಕೆಯ ಆಮದು ಬೆಲೆಯನ್ನು ಹೆಚ್ಚಿಸಿ ಅಡಿಕೆ ಬೆಳೆಗಾರನಿಗೆ ಬೆಂಬಲ ನೀಡಿರುವ ಪ್ರದಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಮತ್ತು ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಹಾಗೂ ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭ ಕರಂದ್ಲಾಜೆಯವರಿಗೆ ಕ್ಯಾಂಪ್ಕೊ ಕೃತಜ್ಞತೆ ಸಲ್ಲಿಸುತ್ತದೆ. ದೆಹಲಿ ನಿಯೋಗದ ನೇತೃತ್ವ ವಹಿಸಿದ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ಕ್ಯಾಂಪ್ಕೊ ದನ್ಯವಾದ ಅರ್ಪಿಸುತ್ತದೆ ಎಂದು ತಿಳಿಸಿದ್ದಾರೆ.

ಧಾರಣೆ ಸ್ಥಿರತೆಗೆ ಸಹಕರಿಸಿ:

ಅಡಿಕೆಯ ಕನಿಷ್ಠ ಆಮದು ಬೆಲೆಯ ಹೆಚ್ಚಳದಿಂದ ಅಡಿಕೆ ಮಾರುಕಟ್ಟೆ ಚೇತರಿಕೆಯಾಗಲಿದ್ದು, ರೈತರು ಸುಳ್ಳು ಸುದ್ಧಿಗಳಿಗೆ ಕಿವಿಗೊಡದೆ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡಿ ಅಡಿಕೆ ಧಾರಣೆಯ ಸ್ಥಿರತೆಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top