ಮೋದಿ ನಾಯಕತ್ವ, ಅಭಿವೃದ್ಧಿ ಕಾರ್ಯಗಳಿಗೆ ಜನಮನ್ನಣೆ
ಹೊಸದಿಲ್ಲಿ : ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ಕರ್ನಾಟಕಕ್ಕೆ ಎರಡು ತಿಂಗಳಲ್ಲಿ ಐದು ಬಾರಿ ಹೋಗಿದ್ದೇನೆ. ಅಲ್ಲಿನ ಜನರ ನಾಡಿಮಿಡಿತ ಅರಿತಿದ್ದೇನೆ. ನರೇಂದ್ರ ಮೋದಿ ಅವರು ಜನಪ್ರಿಯತೆಯನ್ನು ಕರ್ನಾಟಕ ಕಣ್ಣಾರೆ ಕಂಡಿದೆ. ಅಲ್ಲಿ ತುಂಬ ದೊಡ್ಡ ಮಟ್ಟದ ಬಹುಮತ ಬಿಜೆಪಿಗೆ ಸಿಗಲಿದೆ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕಕ್ಕೆ ಹೋಗಿ ಬಂದಿದ್ದೇನೆ. ನಾನು ಆರಂಭಿಸಿದ್ದು ಮಂಡ್ಯ ಮೂಲಕ. ಮಂಡ್ಯದಲ್ಲಿ ಹಿಂದೆಂದು ಕಾಣದ ದೊಡ್ಡ ಸಮಾವೇಶ ಮಾಡಿದ್ದೇವೆ. ಮಂಡ್ಯದ ಜನತೆಯೂ ಪರಿವಾರ ಪಕ್ಷಗಳಿಂದ ದೂರವಾಗಿ ಭಾರತೀಯ ಜನತಾ ಪಕ್ಷದ ಅಭಿವೃದ್ಧಿ ರಾಜಕೀಯವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕ ರಾಜಕೀಯಕ್ಕೆ ಶುಭ ಸಂಕೇತ ಎಂದು ಜೆಡಿಎಸ್‌ನ ಕುಟುಂಬ ರಾಜಕಾರಣವನ್ನು ಅಮಿತ್ ಶಾ ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಲಿದೆ. ಅದರೊಂದಿಗೆ ಮಧ್ಯಪ್ರದೇಶ, ತ್ರಿಪುರಾ, ರಾಜಸ್ಥಾನ, ಛತ್ತೀಸ್ಗಢದಲ್ಲೂ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿಯ ಚುನಾಣಾ ಚಾಣಕ್ಯ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಿಎಫ್ಐ ಸಂಘಟನೆ ವಿರುದ್ಧ ವಾಗ್ದಾಳಿ ನಡೆಸಿರುವ ಅಮಿತ್ ಶಾ, ಕಾಂಗ್ರೆಸ್ ಮತ್ತು ಪಿಎಫ್‌ಐ ಒಂದೇ ಎಂದು ನಾನು ಹೇಳಿಲ್ಲ. ಪಿಎಫ್‌ಐ ಕಾರ್ಯಕರ್ತರ ಮೇಲೆ ನಾನಾ ರೀತಿಯ ಕೇಸ್‌ಗಳಿವೆ. ಕಾಂಗ್ರೆಸ್ ಸರ್ಕಾರ ಪ್ರಕರಣಗಳನ್ನು ಮುಚ್ಚಿ ಹಾಕಲು ಯತ್ನಿಸಿತು. ಆದರೆ ನ್ಯಾಯಾಲಯ ಅದನ್ನು ತಡೆಯಿತು. ವೋಟ್ ಬ್ಯಾಂಕ್ ರಾಜಕಾರಣದ ಹೊರತಾಗಿ ರಾಷ್ಟ್ರದ ಹಿತಾಸಕ್ತಿಯಿಂದಾಗಿ ಪಿಎಫ್ಐ ನಿಷೇಧದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಸ್ಪರ್ಧೆಯಿಲ್ಲ. ದೇಶದ ಜನರು ಪೂರ್ಣ ಹೃದಯದಿಂದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಯುತ್ತಿದ್ದಾರೆ.
2024 ರ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ವಿರೋಧ ಪಕ್ಷದ ಬಗ್ಗೆ ದೇಶದ ಜನರು ನಿರ್ಧರಿಸುತ್ತಾರೆ. ಮತದಾರರು ಯಾವುದೇ ಪಕ್ಷಕ್ಕೆ ಈ ಲೇಬಲ್ ಅನ್ನು ನೀಡಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.