ರಾಜ್ಯಾದ್ಯಂತ ಭಾರಿ ವಿರೋಧ
ಮಂಗಳೂರು : ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಎಸ್‌ಡಿಪಿಐ ಅಭ್ಯರ್ಥಿಯಾಗಿ ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆಯನ್ನು ಕಣಕ್ಕಿಳಿಸುವ ಎಸ್‌ಡಿಪಿಐ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.
ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ಯ ಎನ್‌ಐಎ ವಶದಲ್ಲಿರುವ ಶಾಫಿ ಬೆಳ್ಳಾರೆಗೆ ಟಿಕೆಟ್ ನೀಡುವುದಾಗಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಘೋಷಿಸಿದ್ದಾರೆ. ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಲು ಬೆಳ್ಳಾರೆ ತೀರ್ಮಾನಿಸಿದ್ದು, ಇದು ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿದೆ. ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಬೆಳ್ಳಾರೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಫೆ.10ರಂದು ಪುತ್ತೂರಿನಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಜೀದ್, ಶಾಫಿ ಬೆಳ್ಳಾರೆ ನಮ್ಮ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ. ಅವರನ್ನು ಗೆಲ್ಲಿಸಬೇಕೆಂದು ಘೋಷಣೆ ಮಾಡಿದ್ದರು. ಎಸ್‌ಡಿಪಿಐನಿಂದ ಒಂದನೇ ಹಂತದ ಅಭ್ಯರ್ಥಿಗಳ ಘೋಷಣೆ ಈಗಾಗಲೇ ಮಾಡಿದ್ದು, ಎರಡನೇ ಹಂತದ ಅಭ್ಯರ್ಥಿ ಪಟ್ಟಿಯಲ್ಲಿ ಶಾಫಿ ಬೆಳ್ಳಾರೆ ಹೆಸರು ಘೋಷಣೆ ಮಾಡುವುದಾಗಿ ಅಬ್ದುಲ್ ಮಜೀದ್ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಹೆತ್ತವರಿಗೆ ಆತಂಕ
ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆಗೆ ಟಿಕೆಟ್ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ, ಪ್ರವೀಣ್ ನೆಟ್ಟಾರ್ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಫಿ ಬೆಳ್ಳಾರೆಗೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಅನ್ಯಾಯವಾಗಿ ನಮ್ಮ ಮಗನನ್ನು ಕೊಂದ ಪಾಪಿ ಅವನು. ಅಧಿಕಾರವಿಲ್ಲದೆ ಆತ ನಮ್ಮ ಮಗನನ್ನು ಕೊಂದಿದ್ದಾನೆ. ನಾಳೆ ಅಧಿಕಾರ ಸಿಕ್ಕಿದರೆ ಎಲ್ಲರನ್ನೂ ಕೊಲ್ಲುತ್ತಾನೆ. ನಮಗೆ ಮನೆಯಿಂದ ಹೊರಗೆ ಹೋಗಲಾರದಂತಹ ಸ್ಥಿತಿ ನಿರ್ಮಿಸಬಹುದು. ನಮಗೆ ಇದ್ದ ಒಬ್ಬನೇ ಮಗನನ್ನು ಮುಗಿಸಿದ್ದಾನೆ. ನಮಗೆ ಇಬ್ಬರಿಗೂ ಆರೋಗ್ಯ ಚೆನ್ನಾಗಿಲ್ಲ. ನಮ್ಮನ್ನು ಈ ಸ್ಥಿತಿಗೆ ತಂದ ಆರೋಪಿಗೆ ಚುನಾವಣೆಯಲ್ಲಿ ಸ್ಪರ್ಥಿಸಲು ಅವಕಾಶ ನೀಡಲೇಬಾರದು ಎಂದು ಪ್ರವೀಣ್ ನೆತ್ತಾರು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುತಾಲಿಕ್ ಹೋರಾಟದ ಎಚ್ಚರಿಕೆ
ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮೊತಾಲಿಕ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಲೆಗಡುಕರನ್ನು ಅಭ್ಯರ್ಥಿಯನ್ನಾಗಿ ಮಾಡಲು ಧೈರ್ಯ ತೋರಿದ ಎಸ್‌ಡಿಪಿಐಗೆ ಧಿಕ್ಕಾರ. ಇವರ ಅಭ್ಯರ್ಥಿ ಶಾಫಿ ಬೆಳ್ಳಾರೆ ಓರ್ವ ಕೊಲೆಗಡುಕ, ಸಂಚುಕೋರನಾಗಿದ್ದಾನೆ. ಇವರ ಉದ್ದೇಶವೇ ಹಿಂದೂಗಳನ್ನು ಕೊಲೆ ಮಾಡುವುದಾಗಿದೆ. ರಾಜಕೀಯ ಶಕ್ತಿಯನ್ನು ಬಳಸಿ ಕೊಲೆ ಮಾಡುವ ಉದ್ದೇಶ ಇವರದ್ದಾಗಿದೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಅವಕಾಶ ನೀಡಬಾರದು. ಅವಕಾಶ ನೀಡಿದರೆ ಶ್ರೀರಾಮ ಸೇನೆ ಉಗ್ರ ಹೋರಾಟ ಮಾಡಲಿದೆ ಎಂದು ಪ್ರಮೋದ್ ಮೊತಾಲಿಕ್ ಎಚ್ಚರಿಸಿದ್ದಾರೆ. ಎಸ್‌ಡಿಪಿಐ ವಿವಾದಾತ್ಮಕ ನಡೆಗೆ ಕರಾವಳಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ಎಸ್‌ಡಿಪಿಐ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.