ಟಿಕೆಟ್ ಕೊಡದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ
ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಪಿಎಸ್ಐ ನೇಮಕಾತಿ ಹಗರಣದ ರೂವಾರಿ ಕಾಂಗ್ರೆಸ್ ನಾಯಕ ರುದ್ರಗೌಡ್ ಪಾಟೀಲ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಚಿಸಿ ಟಿಕೆಟ್ ನೀಡುವಂತೆ ಕಾಂಗ್ರೆಸ್ಗೆ ಮನವಿ ಮಾಡಿದ್ದಾನೆ. ರುದ್ರಗೌಡ್ ಪಾಟೀಲ್ಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಕೈ ನಾಯಕರಿಗೆ ಮನವಿ ಮಾಡಿದ್ದೇವೆ. ಟಿಕೆಟ್ ನೀಡದೆ ಇದ್ದರೆ ಬಂಡಾಯ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಗ್ಯಾರಂಟಿ ಎಂದು ಪಾಟೀಲನ ಸಹೋದರ ಮಹಾಂತ್ ಪಾಟೀಲ್ ಹೇಳಿದ್ದಾನೆ.
ಪಿಎಸ್ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿಯಾಗಿರುವ ರುದ್ರಗೌಡ್ ಪಾಟೀಲ್ ಸದ್ಯ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿದ್ದು, ಜಾಮೀನು ಪಡೆಯಲು ಸಾಕಷ್ಟು ಯತ್ನ ನಡೆಸುತ್ತಿದ್ದಾನೆ. ಚುನಾವಣೆಗೆ ಮುನ್ನವೇ ಜಾಮೀನು ಪಡೆಯಬೇಕು. ಜಾಮೀನು ಸಿಗದಿದ್ದರೆ ಜೈಲಿನಿಂದಲೇ ಸ್ಪರ್ಧೆ ಮಾಡಲು ರುದ್ರಗೌಡ ನಿರ್ಧರಿಸಿದ್ದು, ಅದಕ್ಕಾಗಿ ತನ್ನ ಕುಟುಂಬ ಮತ್ತು ಬೆಂಬಲಿಗರ ಮೂಲಕ ಸಿದ್ಧತೆ ಆರಂಭಿಸಿದ್ದಾನೆ. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸಿಕ್ಕಿಬೀಳುವ ಮೊದಲೇ ರುದ್ರಗೌಡ್ ರಾಜಕೀಯ ಎಂಟ್ರಿ ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದ. ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ. ಆದರೆ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಹೆಸರು ಕೇಳಿಬಂದಿದ್ದದರಿಂದ ಸಿಐಡಿ ಅಧಿಕಾರಿಗಳು ರುದ್ರಗೌಡನನ್ನು ಬಂಧಿಸಿದ್ದರು.
ಈ ಹಿಂದೆ ಗ್ರಾಮ ಪಂಚಾಯತ್ ಸದಸ್ಯ, ಅಧ್ಯಕ್ಷನಾಗಿ ಕೆಲಸ ಮಾಡಿರುವ ರುದ್ರಗೌಡ ಪಾಟೀಲ್ ತನ್ನ ಸಮುದಾಯ ಸೇರಿದಂತೆ ಕ್ಷೇತ್ರದಲ್ಲಿ ಯುವ ಪಡೆ ಕಟ್ಟಿಕೊಂಡು ಚುನಾವಣೆಗೆ ಅಖಾಡ ಸಿದ್ದಮಾಡಿಕೊಂಡಿದ್ದ. ಈ ಸಮಯದಲ್ಲಿಯೇ ಪಿಎಸ್ಐ ಕೇಸ್ ಉರುಳು ರುದ್ರಗೌಡ್ ಪಾಟೀಲ್ಗೆ ಸುತ್ತುಕೊಂಡಿತ್ತು. ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ರುದ್ರಗೌಡ ಪಾಟೀಲನ ಸಹೋದರ ಮಹಾಂತೇಶ್ ಪಾಟೀಲ್ ಜಾಮೀನಿನ ಮೇಲೆ ಹೊರಗಡೆ ಇದ್ದು, ಸಹೋದರನ ಪರವಾಗಿ ಕೆಲಸ ಆರಂಭಿಸಿದ್ದಾನೆ. ನಾವು ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇವೆ. ಪಕ್ಷ ಕಟ್ಟಲು ಶ್ರಮಿಸಿದ್ದೇವೆ. ಪಕ್ಷ ಟಿಕೆಟ್ ನೀಡದಿದ್ದರೆ, ಬಂಡಾಯ ಅಭ್ಯರ್ಥಿಯಾಗಿ ರುದ್ರಗೌಡ ಪಾಟೀಲ್ ಸ್ಪರ್ಧಿಸುವುದು ಖಚಿತ ಎಂದು ಮಹಾಂತೇಶ್ ಪಾಟೀಲ್ ಹೇಳಿದ್ದಾನೆ.