ಪ್ರೀತಿ ಮಹಿಮೆಯ ಚಿತ್ರ ರೀತಿಯಂ ವಾಲ್ಮೀಕಿ|
ನೀತಿ ಸೂಕ್ಷ್ಮದ ಗಹನಮಾರ್ಗಮಂ ವ್ಯಾಸರ್||
ಗೀತೆಯಲಿ ವಿಶ್ವಜೀವನರಹಸ್ಯವನವರ್|
ಖ್ಯಾತಿಸಿದರದು ಕಾವ್ಯ–ಮಂಕುತಿಮ್ಮ||
ಪ್ರೀತಿಯ ಹಿರಿಮೆ ಎಂತಹದ್ದು ಎನ್ನುವುದನ್ನು ವಾಲ್ಮೀಕಿ ಮಹರ್ಷಿಗಳು ತಮ್ನ ರಾಮಾಯಣದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಸೂಕ್ಷ್ಮವಾದ ನೀತಿಯ ಗಹನವಾದ ಮಾರ್ಗವನ್ನು ವೇದ ವ್ಯಾಸರು ತಮ್ಮ ಮಹಾಭಾರತ ಕಾವ್ಯದಲ್ಲಿ ವರ್ಣಿಸಿದ್ದಾರೆ. ಭಗವದ್ಗೀತೆಯಲ್ಲಿ ವಿಶ್ವಜೀವನ ಎಂದರೇನು ಎನ್ನುವುದನ್ನು ಮನೋಜ್ಞವಾಗಿ ತಿಳಿಸಿದ್ದಾರೆ. ಹೀಗೆ ಬದುಕಿನ ಮೌಲ್ಯಗಳನ್ನು ಸಾರುವ ಕೃತಿಗಳನ್ನು ಕಾವ್ಯವೆಂದು ಕರೆಯುತ್ತಾರೆ ಎಂದು ಮಾನ್ಯ ಡಿವಿಜಿಯವರು ರಾಮಾಯಣ, ಮಹಾಭಾರತದ ಕುರಿತು ಈ ಮುಕ್ತಕದಲ್ಲಿ ತಿಳಿಸಿದ್ದಾರೆ.
ಭಾವನೆಗಳಿಲ್ಲದೆ ಬದುಕಿಲ್ಲ. ಪ್ರೀತಿ ಒಂದು ಸವಿಯಾದ ಭಾವನೆ. ಈ ಪ್ರೀತಿ ಜೀವನವನ್ನು ಮಧುರವಾಗಿಸುತ್ತದೆ. ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳು ಪ್ರೀತಿಯಲ್ಲಿ ಕೌಟುಂಬಿಕ ಪ್ರೀತಿ, ಸ್ನೇಹಪರ ಪ್ರೀತಿ, ಸಹೋದರ ಪ್ರೀತಿ, ಪ್ರಣಯ ಪ್ರೀತಿ, ದೈವಿಕ ಪ್ರೀತಿ ಹಾಗು ಅತಿಥಿ ಪ್ರೀತಿ ಎಂಬ ಆರು ಪ್ರಕಾರಗಳನ್ನು ಗುರುತಿಸಿದ್ದಾರೆ. ಈ ಎಲ್ಲ ಪ್ರಕಾರದ ಪ್ರೀತಿಗೂ ವಾಲ್ಮೀಕಿ ತನ್ನ ರಾಮಾಯಣ ಕೃತಿಯಲ್ಲಿ ಒಂದೊಂದು ಮಾದರಿಯನ್ನು ನೀಡಿದ್ದಾರೆ.
ಒಲವಿರದ ಗೇಹದಲಿ ಏನಿದ್ದರೇನಂತೆ?|
ನೂರೊಡನೆ ಮಾಣಿಕ್ಯ ಎಲ್ಲ ಬರಿ ಮಣ್ಣು||
ಮನಸಿಗೊಪ್ಪದ ಸದನ ಸುಡುಬಿಸಿಲ ಬೆಂಗಾಡು|
ಪ್ರೀತಿ ಜೀವನ ತುಷ್ಟಿ-ಮುದ್ದುರಾಮ||
ಎಂಬ ಕವಿ ಕೆ. ಶಿವಪ್ಪನವರ ನುಡಿಯಂತೆ ಪ್ರೀತಿ ಬದುಕಿನ ಉಸಿರು. ಇದರ ಮಹಿಮೆಯನ್ನು ಅರಿಯಬೇಕಾದರೆ ರಾಮಾಯಣವನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಬೇಕು.
ಮನ ಹೀನವಾದಾಗ ಎಲ್ಲ ಬರಿ ಲೊಳಲೊಟ್ಟೆ;
ಅಭಿಮಾನ ಸರಿದಾಗ ಅದು ಜೀವ ಹಿಂಸೆ|
ನಡೆಗೆನುಡಿ ಜಾರಿದರೆ ಅದುವೆ ನಾಯಕನರಕ|
ಶೀಲಸಾತ್ವಿಕ ಗುಣವೋ! –ಮುದ್ದುರಾಮ
ಎಂಬ ಕವಿವಾಣಿಯಂತೆ ನೀತಿ ಬದುಕಿಗೆ ಘನತೆಯನ್ನು ತಂದುಕೊಡುತ್ತದೆ. ಇಂತಹ ಸೂಕ್ಷ್ಮವಾದ ನೀತಿಯನ್ನು ವ್ಯಾಸ ಮಹರ್ಷಿಗಳು ತಮ್ಮ ಮಹಾಭಾರತ ಕೃತಿಯಲ್ಲಿ ಚಿತ್ರಿಸಿದ್ದಾರೆ. ಧರ್ಮರಾಯ ಯಕ್ಷನ ನಡುವಿನ ಸಂವಾದ ಮತ್ತು ಕರ್ಣ, ಭೀಷ್ಮ, ದ್ರೋಣ, ವಿದುರ, ಕೃಷ್ಣ, ಹೀಗೆ ಒಂದೊಂದು ಪಾತ್ರದ ಮೂಲಕ ಬದುಕಿನ ನೀತಿಯನ್ನು ಹೇಳುತ್ತಾ ಹೋಗುತ್ತಾರೆ.
‘ಮಾನವ ಜಾತಿ ತಾನೊಂದೆ ವಲಂ’ ಎಂಬ ಪಂಪನ ಸಂದೇಶನವನ್ನು ಗೀತೆಯಲ್ಲಿ ಚಿತ್ರಿಸಲಾಗಿದೆ. ಜಾತಿ,ಮತ,ಧರ್ಮಗಳು ಎಂಬ ಭೇದಭಾವಗಳು ಪ್ರಬಲವಾಗುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ಗೀತೆಯ ವಿಶ್ವಜೀವನ ಸಂದೇಶ ತೀರ ಅಗತ್ಯವೆನಿಸುತ್ತದೆ. ಹೀಗೆ ಕಾವ್ಯಗಳು ಸಾರುವ ಸಂದೇಶವನ್ನು ಅರ್ಥಮಾಡಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ ಕಾರ್ಕಳ ಘಟಕ