ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳಲ್ಲೋರ್ವನಾದ ಶಾಫಿ ಬೆಳ್ಳಾರೆಯನ್ನು ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಎಸ್.ಡಿ.ಪಿ.ಐ. ಪಕ್ಷ ತನ್ನ ನಿಜರೂಪವನ್ನು ಜನರೆದುರು ತೆರೆದಿಟ್ಟಿದ್ದು, ಚುನಾವಣಾ ಆಯೋಗ ಶಾಫಿ ಬೆಳ್ಳಾರೆಯ ಉಮೇದುವಾರಿಕೆಯನ್ನು ಪರಿಗಣಿಸದಂತೆ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿಲುವನ್ನು ಹಂಚಿಕೊಂಡಿರುವ ಶಾಸಕರು, ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿ ಎನ್ನುವ ನೆಲೆಯಲ್ಲಿ ಸೂಕ್ತ ಸಾಕ್ಷ್ಯವನ್ನು ಮುಂದಿಟ್ಟುಕೊಂಡೇ ಎನ್.ಐ.ಎ. ಶಾಫಿ ಬೆಳ‍್ಳಾರೆಯನ್ನು ಬಂಧಿಸಿದೆ. ಇದೀಗ ಜೈಲು ಸೇರಿರುವ ಶಾಫಿ ಬೆಳ್ಳಾರೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಉಮೇದುವಾರಿಕೆಯನ್ನು ಎಸ್.ಡಿ.ಪಿ.ಐ. ಘೋಷಣೆ ಮಾಡಿದೆ. ಈ ಮೂಲಕ ತಾನೊಂದು ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಎಸ್.ಡಿ.ಪಿ.ಐ., ಭಯೋತ್ಪಾದಕ ಸಂಘಟನೆ ಎನ್ನುವುದನ್ನು ರುಜುವಾತು ಪಡಿಸಿದೆ. ಇಂತಹ ಭಯೋತ್ಪಾದಕ ಸಂಘಟನೆಯ ಮುಖವಾಡ ಕಳಚಿ ಬಿದ್ದಿದೆ ಎಂದು ಶಾಸಕ ಸಂಜೀವ ಮಠಂದೂರು ಆಪಾದಿಸಿದ್ದಾರೆ.
ಜಿಹಾದಿಗಳಿಗೆ, ಕೊಲೆಗಡುಕರಿಗೆ ಟಿಕೇಟ್:
ಶಾಫಿ ಬೆಳ್ಳಾರೆಗೆ ಎಸ್.ಡಿ.ಪಿ.ಐ. ಪಕ್ಷದ ಟಿಕೇಟ್ ಘೋಷಣೆ ಮಾಡಿ, ತಮ್ಮ ಪಕ್ಷದಲ್ಲಿ ಜಿಹಾದಿಗಳಿಗೆ, ಕೊಲೆಗಡುಕರಿಗೆ ಮಾತ್ರ ಸ್ಥಾನ ಎಂಬುದನ್ನು ಎಸ್.ಡಿ.ಪಿ.ಐ. ಪಕ್ಷ ಸಾಬೀತುಪಡಿಸಿದೆ. ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆಯ ಸಂಚು ಮೂಲಕ ರಾಜ್ಯಾದ್ಯಂತ ಗಲಭೆ ರೂಪಿಸಲು ಯೋಜನೆ ಹಾಕಿಕೊಂಡಿತ್ತು. ತನ್ನನ್ನು ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುವ ಎಸ್.ಡಿ.ಪಿ.ಐ., ತಾನೊಂದು ಭಯೋತ್ಪಾದಕ ಸಂಘಟನೆ ಎನ್ನುವುದನ್ನು ತಿಳಿಸದಂತಾಗಿದೆ ಎಂದು ದೂರಿದರು.
ಮುಸ್ಲಿಂ ಮತಗಳೇ ಗುರಿ:
ಪ್ರವೀಣ್ ನೆಟ್ಟಾರು ಹತ್ಯೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಬಿಜೆಪಿ, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸರ್ಕಾರವನ್ನೇ ತರಾಟೆಗೆತ್ತಿಕೊಂಡ ಪರಿಣಾಮ, ಎನ್.ಐ.ಎ. ತನಿಖೆ ಚುರುಕು ಪಡೆಯಿತು. ಹಿಂದೂಗಳ ಭಾವನೆಯನ್ನು ಕೆರಳಿಸಿದ್ದ ಈ ಪ್ರಕರಣವನ್ನೇ ಗುರಿಯಾಗಿಟ್ಟುಕೊಂಡು ಇದೀಗ ಎಸ್.ಡಿ.ಪಿ.ಐ. ದಾಳ ಉರುಳಿಸಿದೆ. ಮುಸ್ಲಿಂ ಜನಾಂಗದ ಮತಗಳನ್ನು ಪೂರ್ಣವಾಗಿ ತನ್ನೆಡೆಗೆ ಸೆಳೆದುಕೊಳ್ಳುವ ತನ್ನ ಯೋಜನೆಯ ಭಾಗವಾಗಿ, ಇದೀಗ ಶಾಫಿ ಬೆಳ್ಳಾರೆಯನ್ನು ಕಣಕ್ಕೆ ಇಳಿಸುವ ಘೋಷಣೆ ಮಾಡಿದೆ.