ಕರಾಚಿ: ಪಾಕಿಸ್ಥಾನದಲ್ಲಿ 1 ಕೆಜಿ ಚಹಾಪುಡಿ ಬೆಲೆ 1600 ರೂ! ಆರ್ಥಿಕವಾಗಿ ದಿವಾಳಿಯಾಗಿ ತತ್ತರಿಸುತ್ತಿರುವ ಪಾಕ್‌ನಲ್ಲೀಗ ಜನರಿಗೆ ನಿತ್ಯ ಬಳಕೆಯ ಆಹಾರ ವಸ್ತುಗಳು ಕೂಡ ಬೆಲೆ ಏರಿಕೆಯಿಂದಾಗಿ ಐಷರಾಮಿ ವಸ್ತುಗಳಾಗಿವೆ.
15 ದಿನಗಳ ಹಿಂದೆ ಕೆಜಿಗೆ 1,100 ರೂ. ಇದ್ದ ಚಹಾಪುಡಿ ಬೆಲೆ ಇದೀಗ 1600 ರೂ. ದಾಟಿದೆ. ಕಳೆದ ಡಿಸೆಂಬರ್‌ನಿಂದಲೂ ಬಂದರಿನಲ್ಲೇ ಉಳಿದುಕೊಂಡಿರುವ ಆಮದಾದ ಚಹಾಪುಡಿ ಶೀಘ್ರವೇ ಮಾರುಕಟ್ಟೆಗೆ ಬರದೇ ಇದ್ದರೆ ರಮ್ಜಾನ್ ವೇಳೆಗೆ ಬೆಲೆ 2,500 ರೂ. ದಾಟಬಹುದು ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವಿದೇಶಿ ವಿನಿಮಯ ಸಂಗ್ರಹ ಖಾಲಿಯಾಗಿರುವ ಕಾರಣ ತೀರಾ ಅಗತ್ಯದ ವಸ್ತುಗಳನ್ನು ಮಾತ್ರವೇ ಪಾಕ್ ಸರ್ಕಾರ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಚಹಾ ಆಮದಿಗೂ ಅದರ ಬಿಸಿ ತಟ್ಟಿದೆ. ಮತ್ತೊಂದೆಡೆ ಈಗಾಗಲೇ ವಿದೇಶದಿಂದ ಆಮದು ಮಾಡಿಕೊಂಡು ಬಂದರಿನಲ್ಲಿ ಇರುವ ಚಹಾ ಖರೀದಿಯೂ ವ್ಯಾಪಾರಸ್ಥರಿಗೆ ದೊಡ್ಡ ಸಮಸ್ಯೆಯಾಗಿ ಕುಳಿತಿದೆ. ಏಕೆಂದರೆ ಚಹಾ ಖರೀದಿಗೆ ನೀಡಬೇಕಾದ ಹಣವನ್ನು ಮುಂದಿನ 180 ದಿನಗಳ ನಂತರದ ಡಾಲರ್ ಲೆಕ್ಕಾಚಾರದಲ್ಲಿ ನೀಡಬೇಕಾಗುತ್ತದೆ. 6 ತಿಂಗಳ ಬಳಿಕ ಡಾಲರ್ ಎದುರು ಪಾಕಿಸ್ಥಾನದ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯಬಹುದು ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಬಂದರಿಗೆ ಬಂದಿರುವ ಚಹಾಪುಡಿ ಖರೀದಿಗೂ ಯಾರೂ ಮುಂದಾಗದ ಕಾರಣ ದೇಶದಲ್ಲಿ ಚಹಾಪುಡಿ ಕೊರತೆ ಎದುರಾಗಿದೆ.
ಕಳೆದ ತಿಂಗಳು ಪಾಕಿಸ್ತಾನದಲ್ಲಿ ಗೋಧಿಹಿಟ್ಟಿನ ಬೆಲೆ ಕೆಜಿಗೆ 500 ರೂ.ನಿಂದ 1000 ರೂ..ವರೆಗೂ ತಲುಪಿತ್ತು. ಮತ್ತೊಂದೆಡೆ ಚಿಕನ್ ದರ ಕೇವಲ ಒಂದು ತಿಂಗಳಲ್ಲಿ 300 ರೂ.ಏರಿಕೆಯಾಗಿ ಕೆಜಿಗೆ 700 ರೂ.ಗೆ ತಲುಪಿದೆ.