ಪುತ್ತೂರು : ಪ್ರತಿಷ್ಠಿತ ಕ್ಯಾಂಪ್ಕೋ ಲಿ., ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ( ಎಆರ್ ಡಿಎಫ್) ಹಾಗೂ ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳಿಂದ ನೆಹರೂನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಬೃಹತ್ ಕೃಷಿಯಂತ್ರ ಮೇಳ ಹಾಗೂ ಕನಸಿನ ಮನೆ ವಿವೇಕ ವೈಭವ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಭಾನುವಾರ ಸಂಜೆ ಸಂಪನ್ನಗೊಂಡಿತು.
ಈ ನಡುವೆ ವಿವಿಧ ಗೋಷ್ಠಿಗಳು ನಡೆದವು. ಕಳೆದ ಮೂರು ದಿನಗಳಿಂದ ಕೃಷಿಯಂತ್ರ ಮೇಳಕ್ಕೆ ಸಾಗರೋಪಾದಿಯಲ್ಲಿ ಜನ ಆಗಮಿಸಿದ್ದು, ಮೇಳದ ಕುರಿತು ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಭಾನುವಾರ ರಜಾ ದಿನವಾದ್ದರಿಂದ ಕಿಕ್ಕಿರಿದು ಜನಜಂಗುಳಿ ಮೇಳ ನಡೆಯುವ ಆವರಣಕ್ಕೆ ಜಾಮಾಯಿಸಿದ್ದವು. ಅಲ್ಲಿ ಹಾಕಲಾಗಿದ್ದ ಪ್ರತಿಯೊಂದು ಮಳಿಗೆಗಳಲ್ಲಿ ಜನವೋ ಜನ. ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್ ಸಂಖ್ಯೆಯಲ್ಲಿ ಕೃಷಿಯಂತ್ರ ಮಳಿಗೆ ಜನರ ಮನಸೂರೆಗೊಂಡವು. ಪ್ರಾತ್ಯಕ್ಷಿಕೆ, ಮಾಹಿತಿಗಳಿಂದ ರೈತಾಪಿ ವರ್ಗವನ್ನು ಕೃಷಿ ಚಟುವಟಿಕೆಗಳನ್ನು ಮತ್ತಷ್ಟು ತೊಡಗಿಸಿಕೊಳ್ಳಲು ಹುಮ್ಮಸ್ಸು ನೀಡಿತು.
ಯಂತ್ರಮೇಳದ ಅಂಗವಾಗಿ ಸಂಜೆ 3 ರಿಂದ 5 ಗಂಟೆ ತನಕ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ವಿವೇಕ ವೈಭವ ಚೆನ್ನಾಗಿ ಮೂಡಿ ಬಂತು. ಬಳಿಕ ೬ ಗಂಟೆಯಿಂದ ರಾತ್ರಿ 8 ಗಂಟೆ ತನಕ ಪೂರ್ಣಿಮಾ ಮತ್ತು ಬಳಗದವರಿಂದ ವಿವಿಧ ಸಾಂಸ್ಕೃತಿಕ ವೈಭವ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಮೂಲಕ ಕೃಷಿಯಂತ್ರ ಮೇಳ ಸಂಪನ್ನಗೊಂಡಿತು.
ಸಾಂಸ್ಕೃತಿಕ ಕಾರ್ಯಕ್ರಮ ಮುಗಿದರೂ ಮಳಿಗೆ ರಾತ್ರಿ 10 ರ ತನಕ ಕಾರ್ಯಾಚರಿಸುತ್ತಿತ್ತು. ವೀಕ್ಷಕ ವರ್ಗ ಪ್ರಾತ್ಯಕ್ಷಿಕೆ, ಮಾಹಿತಿ ಪಡೆಯುವುದರ ಜತೆಗೆ ಕೃಷಿಯಂತ್ರಗಳ ಖರೀದಿ ಮಾಡಿದರು.