ಪುತ್ತೂರು : ಮುಂದಿನ ಚುನಾವಣೆ ವ್ಯವಸ್ಥೆಯ ಹಿನ್ನಲೆಯಲ್ಲಿ ಶನಿವಾರ ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ಮಾಡಿದ್ದು, ಹೊರತು ಪುತ್ತೂರಿನ ಜನತೆಗೆ ಬೇರೆ ಯಾವುದೇ ವಿಚಾರದಲ್ಲಿ ಪರಿಣಾಮ ಬೀರಿಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಹೇಳಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಓರ್ವ ಪ್ರಮುಖ ವ್ಯಕ್ತಿ ಪುತ್ತೂರಿಗೆ ಬರುತ್ತಾರೆ ಎಂದ ಮೇಲೆ ರಸ್ತೆಗಳು ಶೀಘ್ರ ರಿಪೇರಿ, ಡಾಮರೀಕರಣ ಆಗುತ್ತದೆ. ಆದರೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಎಷ್ಟೋ ಕಾಮಗಾರಿಗಳು ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ ಕರಾವಳಿಯ ಜೀವನಾಡಿ ಅಡಿಕೆ ಬೆಳೆ ಪರವಾದ ಯಾವ ಘೋಷಣೆಯನ್ನೂ ಅಮಿತ್ ಶಾ ಮಾಡಿಲ್ಲ. ಈ ನಿಟ್ಟಿನಲ್ಲಿ ಅಮಿತ್ ಶಾ ಭೇಟಿ ಬಂದ ಪುಟ್ಟ ಹೋದ ಪುಟ್ಟ ಎಂಬತಾಗಿದೆ ಎಂದು ಅವರು ಲೇವಡಿ ಮಾಡಿದರು.
ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಮಾತನಾಡಿ, ಸಚಿವ ಅಮಿತ್ ಶಾ ಅವರ ಭೇಟಿ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಆದರೆ ಅವರು ಕ್ಯಾಂಪ್ಕೋ ವಿಚಾರವಾಗಿ ಏನನ್ನೂ ಮಾತನಾಡದೆ ರಾಜ್ಯದಲ್ಲಿ ಬಿಜೆಪಿಯನ್ನು ಮರು ಸ್ಥಾಪಿಸುತ್ತೇವೆ ಎಂಬ ಘೊಷಣೆಯನ್ನು ಕೂಗುವುದರ ಮೂಲಕ ಚುನಾವಣೆ ಪ್ರಚಾರಕ್ಕೋಸ್ಕರ ಬಂದವರು ಎಂಬುದು ಇದರಿಂದ ತಿಳಿಯುತ್ತದೆ. ಅಮಿತ್ ಶಾ ಅವರನ್ನು ಕ್ಯಾಂಪ್ಕೋ ಸಂಸ್ಥೆಯವರು ಬರಮಾಡಿಕೊಳ್ಳಬೇಕಿತ್ತು. ಇಲ್ಲಿ ಬಿಜೆಪಿಯವರಿಗೆ ಏನು ಕೆಲಸ ಎಂದು ಪ್ರಶ್ನಿಸಿದ ಅವರು, ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ ಇದೊಂದು ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿದೆ, ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡ ಬಿಜೆಪಿ ಕಾರ್ಯಕರ್ತರು ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಅಮಿತ್ ಶಾ ಅವರ ಶ್ಲೋಗನನ್ನು ಬಿಜೆಪಿಯವರು ದುರುಪಯೋಗಪಡಿಸಿದ್ದಾರೆ. ನಿಜವಾಗಿ ಅಮಿತ್ ಶಾ ಅವರು ಭಾರತ್ ಮಾತೆ ಮೇಲಿನ ಕಾಳಜಿಯಿಂದ ಭಾರತ್ ಮಾತಾ ಕೀ ಜೈ ಎಂದಿದ್ದರೆ ಬಿಜೆಪಿಯನ್ನು ಮರು ಸ್ಥಾಪಿಸುತ್ತೇವೆ ಎಂದು ಯಾಕೇ ಹೇಳಿದರು. ಮತ್ತೊಂದೆಡೆ ನಳಿನ್ ಕುಮಾರ್ ಕಟೀಲ್ ಕ್ಯಾಂಪ್ಕೋ ಸಂಸ್ಥೆಯವರ ಪ್ರಾಸ್ತಾವಿಕ ಮಾತುಗಳನ್ನು ಅರ್ಧದಲ್ಲೇ ಮೊಟಕುಗೊಳಿಸಿರುವುದರ ಕಾರಣವೇನು , ಮೊಟಕುಗೊಳಿಸಲು ನಳಿನ್ ಕುಮಾರ್ ಕಟೀಲ್ ಯಾರು ಎಂದು ಪ್ರಶ್ನಿಸಿದರು. ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ಹೀಯಾಳಿಸಲು ಇಂತಹಾ ವೇದಿಕೆಯನ್ನು ಉಪಯೋಗಿಸಿದ್ದಾರೆ ಎಂದು ಆರೋಪಿಸಿದರು.
ಇನ್ನೊಂದೆಡೆ ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ಎರಡು ಕಡೆಗಳಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಇದರ ನಿರ್ಮಾಣಕ್ಕೆ ಟೆಂಡರ್ ಆಗಿದೆಯೇ. ಬಿಜೆಪಿ ಸರಕಾರದ ಬೊಕ್ಕಸದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ ಎನ್ನುವುದಕ್ಕೆ ಇದು ಜ್ವಲಂತ ಸಾಕ್ಷಿ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಸಾಮಾಜಕಿ ಜಾಲತಾಣದ ಸಿದ್ದಿಕ್ ಸುಲ್ತಾನ್, ಮುಖಂಡ ರವೀಂದ್ರ ನೆಕ್ಕಿಲು ಉಪಸ್ಥಿತರಿದ್ದರು.