ಸುಳ್ಯ : ಪುತ್ತೂರಿನ ಕೌಡಿಚ್ಚಾರು ನಿವಾಸಿಗಳಾದ ಇಬ್ಬರು ಯುವಕರು ಸುಳ್ಯದ ಪಯಸ್ವಿನಿ ನದಿ ಪಾಲಾದ ಘಟನೆ ಶನಿವಾರ ಸಂಜೆ ನಡೆದಿದೆ. ಮೃತದೇಹಗಳನ್ನು ಮೇಲೆತ್ತಿದ್ದು, ಜಿತೇಶ್ ಹಾಗೂ ಪ್ರವೀಣ್ ಮೃತಪಟ್ಟವರೆಂದು ಗುರುತಿಲಾಗಿದೆ.
ಪುತ್ತೂರಿನ ಕೌಡಿಚ್ಚಾರು ಪರಿಸರದ ಆರು ಯುವಕರು ಕಾರಿನಲ್ಲಿ ಸುಳ್ಯಕ್ಕೆ ಬಂದು ಓಡಬಾಯಿ ತೂಗು ಸೇತುವೆ ಬಳಿ ಕಾರು ನಿಲ್ಲಿಸಿ ದೊಡೇರಿಯವರೆಗೆ ಹೋಗಿ, ಬಳಿಕ ಪಯಸ್ವಿನಿ ನದಿಗೆ ಈಜಲೆಂದು ತೆರಳಿದ್ದರು. ಅವರಲ್ಲೋರ್ವ ನೀರು ಪಾಲಾದಾಗ, ಜೊತೆಗಿದ್ದ ಇನ್ನೊಬ್ಬಾತ ರಕ್ಷಿಸಲೆಂದು ನೀರಿಗೆ ಧುಮುಕ್ಕಿದ್ದಾನೆ. ನೀರಿನ ಸೆಳೆತಕ್ಕೆ ಗೆಳೆಯನನ್ನು ರಕ್ಷಿಸಲಾಗದೇ, ತನ್ನನ್ನು ತಾನೂ ರಕ್ಷಿಸಲಾಗದೇ ಇಬ್ಬರೂ ನದಿ ಪಾಲಾಗಿದ್ದಾರೆ.
ಮೃತದೇಹಗಳನ್ನು ನೀರಿನಿಂದ ಹೊರ ತೆಗೆದು, ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮೃತ ಪ್ರವೀಣ್ ಕೌಡಿಚಾರಿನ ಅಂಬಟೆಮೂಲೆ ಕೃಷ್ಣಪ್ಪ ನಾಯಕ್ ಪುತ್ರ. ಜಿತೇಶ್ ದೇರಳಿ ನಿವಾಸಿ ನಾರಾಯಣ ಅವರ ಪುತ್ರ. ಇವರಿಬ್ಬರೂ ಯಂತ್ರದಲ್ಲಿ ಕಾಡು ಕಡಿಯುವ ಕೆಲಸ ಮಾಡುತ್ತಿದ್ದರು. ಶನಿವಾರ ಕೆಡ್ಡಸದ ಪ್ರಯುಕ್ತ ಕೆಲಸಕ್ಕೆ ರಜೆ ಇದ್ದುದರಿಂದ ಗೆಳೆಯರೊಂದಿಗೆ ಸುಳ್ಯಕ್ಕೆ ತೆರಳಿದ್ದರು.